ನಾಗಮಂಗಲ: ರೈತರಿಂದ ಕೊಬ್ಬರಿ ಖರೀದಿ ಮಾಡಿ 2 ತಿಂಗಳು ಕಳೆಯುತ್ತ ಬಂದರೂ ಈವರೆಗೂ ರೈತರಿಗೆ ಸಿಗಬೇಕಾದ ಹಣವನ್ನು ಅವರ ಖಾತೆಗೆ ಹಾಕದೆ ಅಧಿಕಾರಿಗಳು ಕಾಡಿಸುತ್ತಿದ್ದಾರೆ ಎಂದು ರೈತ ಸಂಘಟನೆ ಅಧ್ಯಕ್ಷ ಸುರೇಶ್ ಕಿಡಿಕಾರಿದ್ದಾರೆ.
ಇಂದು ನಾಗಮಂಗಲ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆಯು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತರಿಂದ ಆರು ತಿಂಗಳು ಹಿಂದೆಯೇ ಖರೀದಿ ಮಾಡಬೇಕಾಗಿದ್ದ ಕೊಬ್ಬರಿ ತಡವಾಗಿ ಖರೀದಿ ಮಾಡಿದರೂ ನಮ್ಮಗಳ ಖಾತೆಗೆ ಸುಮಾರು ಎರಡು ತಿಂಗಳಾದರೂ ಹಣ ಬಂದಿಲ್ಲ. ಇದರಿಂದ ನಮ್ಮ ಮಕ್ಕಳ ಶೈಕ್ಷಣಿಕ್ಕಾಗಿ ಶಾಲೆಗಳ ಶುಲ್ಕ ಭರಿಸುವುದಕ್ಕೆ ಪರದಾಡುವಂತಾಗಿದೆ. ನಮ್ಮ ಹಣವೇ ನಮ್ಮ ಅನುಕೂಲಕ್ಕೆ ದೊರಕದಿರುವುದು ಭಾರಿ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಹೆಸರಿಗಷ್ಟೇ ಕೊಬ್ಬರಿ ಕೇಂದ್ರವಿದೆ. ಇದರಿಂದ ಯಾವುದೇ ರೀತಿಯಲ್ಲೂ ರೈತರಿಗೆ ದೊರಕಬೇಕಾದ ಸೌಲಭ್ಯಗಳು ಹಾಗೂ ಖರೀದಿ ಮಾಡುವ ವ್ಯವಸ್ಥೆಯ ಯೋಜನೆಗಳು ಸಕಾಲಕ್ಕೆ ಆಗುತ್ತಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ಎದ್ದುಕಾಣುತ್ತಿದ್ದು ಈ ಬಗ್ಗೆ ಕೃಷಿ ಸಚಿವರು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇನ್ನು ಕೃಷಿ ಸಚಿವರ ತವರು ನೆಲದಲ್ಲೇ ರೈತರಾದ ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಆಲಿಸುತ್ತಿಲ್ಲ ಎಂದರೆ ಬೇರೆಡೆಯಲ್ಲಿ ಇನ್ನೆಂಥ ಪರಿಸ್ಥಿತಿ ಇದೆ ಎಂಬುವುದು ತಿಳಿಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ರೈತರು ಒಕ್ಕಲುತನವನ್ನೇ ನಂಬಿ ಜೀವನ ನಡೆಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇಂತಹ ಸಮಸ್ಯೆಗಳಿಂದ ರೈತ ಸಾಲ ಮಾಡಿ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಆದ ಕೃಷಿ ಸಚಿವ ಚೆಲುವರಾಯ ಸ್ವಾಮಿ ನಮ್ಮ ಈ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಬರ ಪರಿಹಾರದ ಹಣ ಸಮರ್ಪಕವಾಗಿ ರೈತರಿಗೆ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಆಧಾರ್ ಜೋಡಣೆಯನ್ನು ಮಾಡದೆ ಇರುವುದು ಹಾಗೂ ಕೊಳೇಬಾವಿಯ ವಿದ್ಯುತ್ ಪಡೆಯುವ ಅಕ್ರಮ ಸಕ್ರಮ ಯೋಜನೆ ಕೈ ಬಿಟ್ಟಿರುವುದು ಕಾರಣವಾಗಿದೆ.
ಇನ್ನು ತಾಲೂಕಿನಲ್ಲಿ ಖಾಸಗಿ ಶಾಲೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು ಇದರಿಂದ ಬಡ ರೈತರ ಮಕ್ಕಳ ವಿದ್ಯಾಭ್ಯಾಸ ಕಮರುವಂತಿದೆ. ತಕ್ಷಣವೇ ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಅಲ್ಲದೆ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ರೈತ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕುದೆ ಎಂದು ಒತ್ತಾಯಿಸಿದರು.
ಸುದಿಗೋಷ್ಠಿಯಲ್ಲಿ ಬೋರಯ್ಯ, ರವಿಕುಮಾರ್, ಚಿಕ್ಕೇಗೌಡ, ಸಿದ್ದಲಿಂಗಯ್ಯ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಇದ್ದರು.