ತಿ. ನರಸೀಪುರ: ಜಮೀನಿಗೆ ಈ ವಾರದಲ್ಲಿ ನೀರು ಬಿಡದಿದ್ದರೆ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಸಂಘದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತ್ತೆ ಜಮೀನಿಗೆ ನೀರು ಬಿಡುವ ಸಮಯದಲ್ಲಿ ಹೂಳೆತ್ತುವ ಕೆಲಸ ಮಾಡಿಸುತ್ತಿದ್ದಾರೆ ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಇನ್ನು ಒಂದು ತಿಂಗಳಿಂದಲ್ಲೂ ಕಾವೇರಿ ಮತ್ತು ಕಬಿನಿ ಜಲಾಶಯಗಳಿಂದ ನೀರು ಹರಿದು ಮೆಟ್ಟೂರ್ ಡ್ಯಾಮ್ ತುಂಬಿ ಸಮುದ್ರಕ್ಕೆ ನೀರು ಹೋಗುತ್ತಿದೆ. ಆದರೆ, ಇದೇ ರಾಜ್ಯದ ರೈತರ ಜಮೀನಿಗೆ ನೀರು ಬಿಡದಿರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡದ ಕಾರಣ ಹೂಳೆತ್ತುವ ಕೆಲಸ ಈಗ ಶುರುವಾಗಿದೆ. ಶೀಘ್ರದಲ್ಲಿ ಹೂಳೆತ್ತುವ ಕೆಲಸವನ್ನು ಮುಗಿಸಿ ಈ ವಾರದಲ್ಲಿ ನೀರು ಬಿಡದಿದ್ದರೆ ಕಚೇರಿಗಳ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇತ್ತ ತಲಕಾಡು ಹೋಬಳಿ ತಡಿಮಾಲಂಗಿ ಗ್ರಾಮ ಪ್ರವಾಹಕ್ಕೆ ತುತ್ತಾಗಿ ಜನರು ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಅವರಿಗೆ ಪರಿಹಾರ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರೈತ ಸಂಘ ತಾಲೂಕು ಘಟಕದ ಮಹಿಳಾ ಅಧ್ಯಕ್ಷರಾಗಿ ಗೀತಾ ಶಿವಶಂಕರ್ ಅವರನ್ನು ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಇವರು ಮೂರು ವರ್ಷ ತಾಲೂಕು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ ಎಂದರು.
ಕಾರ್ಯಾಧ್ಯಕ್ಷ ಈ ರಾಜು, ತಲಕಾಡು ದಿನೇಶ್, ಪರಮೇಶ್, ಪುಟ್ಟೇಗೌಡ ನಾರಾಯಣ ಟೈಲರ್, ಆಲಗೂಡು ಮಹದೇವ, ಶಾಂತ ಮೂರ್ತಿ, ಮಾಡ್ರಳ್ಳಿ, ನಂಜುಂಡಸ್ವಾಮಿ , ಶಿವಣ್ಣ, ಯೋಗೇಶ್, ಮಹೇಶ,ಕಾಂತರಾಜ್ ಸೇರಿದಂತೆ ಮತ್ತಿತರರು ಇದ್ದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರು ತಮ್ಮ ಜಮೀನಿನ ಪಕ್ಕದ ನಾಲೆಗಳಿಂದ ಪಂಪ್ ಸೇಟ್ ಬಳಸಿ ಬೆಳಗೆ ನೀರು ತೆಗೆದುಕೊಂಡರೆ ಅಂತ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರೈತ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ. ಇದೇ ಹೇಳಿಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.
l ಕರೋಹಟ್ಟಿ ಕುಮಾರಸ್ವಾಮಿ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ತಿ.ನರಸೀಪುರ ತಾಲೂಕು