ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಶನಿವಾರ ರಾತ್ರಿ ಮೃತಪಟ್ಟಿದ್ದರು.
ಆ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅಪಘಾತದಲ್ಲಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಗೊರವನಹಳ್ಳಿ ಗ್ರಾಮದ ಬಸವರಾಜು ಎಂಬುವರ ಪತ್ನಿ ರೇಖಾ ಮತ್ತು ಪುತ್ರಿ ಸಂಜನಾ, ಮಲ್ಲೇಶ್ ಎಂಬುವರ ಪತ್ನಿ ಮಮತಾ ಹಾಗೂ ಗಾಮನಹಳ್ಳಿ ಗ್ರಾಮದ ಮಹದೇವಮ್ಮ (55) ಮೃತರು.
ಶನಿವಾರ ರಾತ್ರಿ ದುರಂತ ಸಂಭವಿಸಿದ್ದು, ನಾಲ್ವರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಕಾರು ಚಾಲಕ ಮನೋಜ್ಗೆ ಸಣ್ಣಪುಟ್ಟಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಆದಿಚುಂಚನಗಿರಿಯಲ್ಲಿ ಹರಕೆಸೇವೆ ಇದ್ದಿದ್ದರಿಂದ ಆದಿಚುಂಚನಗಿರಿಗೆ ತೆರಳಲು ಸ್ವಗ್ರಾಮ ಗೊರವನಹಳ್ಳಿಯಿಂದ ಕಾರಿನಲ್ಲಿ ಮನೋಜ್, ರೇಖಾ, ಸಂಜನಾ, ಮಮತಾ ಹೊರಟಿದ್ದು, ಗಾಮನಹಳ್ಳಿಗೆ ಬಂದು ಮಹದೇವಮ್ಮ ಅವರನ್ನು ಹತ್ತಿಸಿಕೊಂಡು ಬಳಿಕ ದೊಡ್ಡಮುಲುಗೂಡಿನಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ನಾಲಾ ಏರಿ ಮೇಲೆ ಕಾರು ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ಉಪನಾಲೆಗೆ ಉರುಳಿ ಬಿದ್ದಿದೆ. ಈ ವೇಳೆ ನಾಲೆಯೊಳಗೆ ತಲೆಕೆಳಗಾಗಿ ಕಾರು ಬಿದ್ದಿದ್ದರಿಂದ ನಾಲ್ವರು ಮಹಿಳೆಯರು ಹೊರಬರಲಾಗದೇ ಸ್ಥಳದಲ್ಲೇ ಅಸುನೀಗಿದ್ದಾರೆ.
ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಚೆಲುವರಾಯಸ್ವಾಮಿ ಮತ್ತು ಎಚ್.ಸಿ. ಮಹದೇವಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿರುವ ಮಾಹಿತಿ ನೀಡಿದರು.