ನ್ಯೂಡೆಲ್ಲಿ: ದೇಶದ 10 ರಾಜ್ಯಗಳ 96 ಕ್ಷೇತ್ರಗಳಿಗೆ ಸೋಮವಾರ ರಾತ್ರಿ 8 ಗಂಟೆ ವರೆಗೂ ನಡೆದ ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಶೇ. 62.84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2019ರ ಚುನಾವಣೆಗೆ ಹೋಲಿಸಿದರೇ ಶೇ.2.5ರಷ್ಟು ಕಡಿಮೆ ಮತದಾನವಾಗಿದೆ. ಕಳೆದ ಬಾರಿ ಶೇ.65.51ರಷ್ಟು ಮತದಾನ ನಡೆದಿತ್ತು ಎಂದು ಆಯೋಗ ವಿವರಿಸಿದೆ. ಒಟ್ಟು 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಸೋಮವಾರ ಆಂಧ್ರ ಪ್ರದೇಶದ 25, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11, ಬಂಗಾಳದ 8, ಬಿಹಾರದ 5, ಒಡಿಶಾ, ಜಾರ್ಖಂಡ್‌ನ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 1 ಸ್ಥಾನಕ್ಕೆ ಮತದಾನ ನಡೆದಿದ್ದು, 1717 ಅಭ್ಯರ್ಥಿಗಳು ಅದೃಷ್ಟ ಮತಯಂತ್ರ ಸೇರಿದೆ.
ಇನ್ನು ದೇಶಾದ್ಯಂತ 23ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಈವರೆಗೆ 379 ಸ್ಥಾನಗಳಿಗೆ ಮತದಾನ ನಡೆದಿದೆ. ನಾಲ್ಕು ಹಂತದ ಮತದಾನದಲ್ಲಿ ಮೊದಲ ಹಂತದಲ್ಲಿ ಶೇ. 66.14, ಎರಡನೇ ಹಂತದಲ್ಲಿ ಶೇ 66.71, ಮೂರನೇ ಹಂತದಲ್ಲಿ ಶೇ 65.68 ಮತದಾನ ನಡೆದಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.