ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮತ್ತು ಶಾಲಾ ಶಿಕ್ಷಣವನ್ನು ಅರ್ಧಕ್ಕೆ ಬಿಡುವ ಸಮಸ್ಯೆಯ ನಿವಾರಣೆಗೆ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಬಸ್ ಸೇವೆಗಳನ್ನು ಪ್ರಾರಂಭಿಸಿದ್ದು, ಇದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ.
ಪಂಜಾಬ್ ಸರ್ಕಾರವು ರಾಜ್ಯದಾದ್ಯಂತ ಸುಮಾರು 200 ಶಾಲೆಗಳಿಗೆ ಬಸ್ ಸೇವೆಗಳನ್ನು ಈಗಾಗಲೇ ಆರಂಭಿಸಿದ್ದು, 10,448 ವಿದ್ಯಾರ್ಥಿಗಳು ಈ ಸೇವೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ದೂರದೂರದ ಶಾಲೆಗಳಿಗೆ ಪ್ರಯಾಣಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು, ವಿಶೇಷವಾಗಿ ಬಾಲಕಿಯರು ತಮ್ಮ ಶಾಲಾ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಡುತ್ತಿದ್ದದ್ದನ್ನು ತಡೆಯಲು ಈ ಯೋಜನೆಯನ್ನು ತರಲಾಗಿದೆ. ಈ ಬಸ್ ಸೇವೆಯನ್ನು ಪಂಜಾಬ್ ಸರ್ಕಾರವು ಕ್ರಮೇಣವಾಗಿ ವಿಸ್ತರಿಸಲು ಯೋಜಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಆದರೆ, ನಮ್ಮ ಕರ್ನಾಟಕದಲ್ಲಿ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡಿದ್ದರೂ ಅವರಿಗೆ ಸರಿಯಾದ ಬಸ್ ಸೇವೆ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಈ ರೀತಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಒತ್ತಾಯಿಸಿದ್ದಾರೆ.