
ರಾಮನಗರ: ತತ್ವಪದ ಸಾಹಿತ್ಯ, ಭಕ್ತಿ ಸಾಹಿತ್ಯ, ಕೀರ್ತನಾ ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿರುವ ಯುವ ಸಂಶೋಧನಾರ್ಥಿಗಳಿಗೆ 2025ರ ಮಾರ್ಚ್ 8 ಮತ್ತು 9ರಂದು ಮುದ್ದುಶ್ರೀ ದಿಬ್ಬ, ಕೆರೆಮೇಗಳದೊಡ್ಡಿಯಲ್ಲಿ ಅಧ್ಯಯನ ಕಮ್ಮಟ ಆಯೋಜಿಸಿದೆ.
ತತ್ವಪದ ಸಾಹಿತ್ಯ, ಭಕ್ತಿ ಸಾಹಿತ್ಯ, ಕೀರ್ತನಾ ಸಾಹಿತ್ಯ ಕುರಿತಂತೆ ಅಧ್ಯಯನ ವ್ಯಾಪ್ತಿ ಹೊಂದಿರುವ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಮತ್ತು ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ಸಂಯುಕ್ತವಾಗಿ ಈ ಅಧ್ಯಯನ ಕಮ್ಮಟ ಆಯೋಜಿಸಲಾಗಿದೆ ಎಂದು ಸಾಹಿತಿ ಡಾ.ಎಂ.ಬೈರೇಗೌಡ ತಿಳಿಸಿದ್ದಾರೆ.
ಮಾರ್ಚ್ 8ರಂದು ಬೆಳಗ್ಗೆ 10 ಗಂಟೆಗೆ ಕಮ್ಮಟದ ಉದ್ಘಾಟನೆ ನೆರವೇರುವುದು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸುವರು. ಹಿರಿಯ ವಿದ್ವಾಂಸರಾದ ಡಾ. ಮೀನಾಕ್ಷಿ ಬಾಳಿ ಶಿಬಿರ ನಿರ್ದೇಶಕರಾಗಿ ಕಾರ್ಯಕ್ರಮ ಉದ್ಘಾಟಿಸುವರು.
ಸಾಹಿತಿ ಡಾ. ಮಹೇಶ್ ಹರವೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಸದಸ್ಯರಾದ ಡಾ. ಚಕ್ಕೆರೆ ಶಿವಶಂಕರ್, ಎಚ್. ದಂಡಪ್ಪ ಉಪಸ್ಥಿತರಿರುವರು ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಸದಸ್ಯ ಕಾರ್ಯದರ್ಶಿ ಎಸ್. ಕರಿಯಪ್ಪ ಮತ್ತು ಕೆ.ಎಸ್.ಎಂ. ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬೈರೇಗೌಡ ತಿಳಿಸಿದ್ದಾರೆ.