ಬೆಂಗಳೂರು: ವಿಧಾನಪರಿಷತ್ ಕಲಾಪ ಇಂದು ಆರಂಭವಾದ ಬೆನ್ನಲ್ಲೇ ಗದ್ದಲ ಎದ್ದಿದ್ದು, ನಿಲುವಳಿ ಸೂಚನೆ ಕುರಿತಂತೆ ಬಿಜೆಪಿ ಪ್ರಸ್ತಾಪಿಸಿದ ಬೆನ್ನಲ್ಲೇ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಿಜೆಪಿ ಶಾಸಕರು ಸದನ ಬಾವಿಗಿಳಿದು ಘೋಷಣೆ ಕೂಗಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಸದನದಲ್ಲಿ ನಿಲುವಳಿ ಪ್ರಸ್ತಾಪಕ್ಕೆ ಮುಂದಾದರು. ಈ ವೇಳೆ ಪ್ರಶ್ನೋತ್ತರ ಕಲಾಪ ಮುಗಿದ ಮೇಲೆ ನಿಲುವಳಿ ಮಂಡಿಸಿ ಎಂದು ಪೂಜಾರಿ ಅವರಿಗೆ ಸಭಾಪತಿ ಎಂ.ಕೆ.ಪ್ರಾಣೇಶ್ ಸೂಚನೆ ನೀಡಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಎದ್ದಿದ್ದು ಕೂಲಾಹಲವೇ ಸೃಷ್ಟಿಯಾಯಿತು.
ಈ ವೇಳೆ ಸಭಾಪತಿ ಪ್ರಾಣೇಶ್ ಅವರು ಗರಂ ಆದ ಪ್ರಸಂಗವು ನಡೆಯಿತು. ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಗ್ಯಾರಂಟಿ ಷರತ್ತುಗಳ ವಿಧಿಸಿರುವ ವಿಚಾರವಾಗಿ ನಿಡುವಳಿ ಸೂಚನೆ ಪ್ರಸ್ತಾಪಕ್ಕೆ ಮುಂದಾದರು. ಈ ವೇಳೆ ಸಭಾಪತಿ ಎಂಕೆ ಪ್ರಾಣೇಶ್ ಗರಂ ಆದರು.
ನಿಮಗೆ ನಿಮಯಗಳು ಗೊತ್ತಿದೆ ಅಲ್ವ. ನೀವು ಕೊಟ್ಟ ಮೇಲೆ ನಿಲುವಳಿ ಸೂಚನೆಯನ್ನು ಪರಿಶೀಲನೆ ಮಾಡಿ. ಯಾವ ರೀತಿ ಅವಕಾಶ ನೀಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಪ್ರಾಣೇಶ್ ಹೇಳಿದರು. ಆದರೆ ಈ ವೇಳೆ ಕಾಂಗ್ರೆಸ್ ಸದಸ್ಯರಿಂದ ಬಿಜೆಪಿ ವಿರುದ್ಧ ವಿರೋಧ ವ್ಯಕ್ತವಾಯಿತು. ಪರಿಷತ್ ಕಲಾಪದಲ್ಲಿ ಗದ್ದಲ, ಮಾತಿನ ಚಕಮಕಿ ಮುಂದುವರಿಯಿತು.
ಇದು ಗಂಭೀರವಾಗಿದ್ದು, ಸರ್ಕಾರ ನೀಡಿರುವ ಭರವಸೆಯನ್ನು ಸರಿಯಾಗಿ ಈಡೇರಿಸಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿ. ಹೀಗಾಗಿ ಇಲ್ಲಿ ಪ್ರಸ್ತಾಪ ಮಾಡಬೇಕಿದೆ. ಆದರೆ ಅದಕ್ಕೆ ಅವಕಾಶವನ್ನೇ ಕೊಡದೆ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿಕಾರಿದರು.
ಇನ್ನು ಗ್ಯಾರಂಟಿಗಳ ಷರತ್ತುಗಳ ಮೇಲೆ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ ಪ್ರಶ್ನೋತ್ತರಕ್ಕಿಂತ ಮುಂಚೆ ಚರ್ಚೆಗೆ ಅವಕಾಶ ಇಲ್ಲ ಎಂದ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಭಾಪತಿಗಳು ಕುಳಿತುಕೊಳ್ಳುವಂತೆ ಮನವಿ ಮಾಡಿದ್ದರು. ಆದರೂ ಸದನದಲ್ಲಿ ಆಡಳಿತ – ವಿಪಕ್ಷ ಸದಸ್ಯರ ನಡುವಿನ ಗದ್ದಲ ತಾರಕಕ್ಕೇರಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದಡಲಾಯಿತು.