GBA: ಒಣ-ಹಸಿ ಕಸ ಬೇರ್ಪಡಿಸಿ, ಬ್ಲಾಕ್ ಸ್ಪಾಟ್, ರಸ್ತೆ ಸ್ವಚ್ಛಗೊಳಿಸಲು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಾಕೀತು


ಬೆಂಗಳೂರು: ಜಿಬಿಎ ಉತ್ತರ ನಗರ ಪಾಲಿಕೆಯಲ್ಲಿ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿ ಹಾಗೂ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ ರಸ್ತೆ ಸ್ವಚ್ಛಗೊಳಿಸಿ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಾಕೀತು ಮಾಡಿದ್ದಾರೆ.
ಇಂದು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗ ವ್ಯಾಪ್ತಿಯ ಮಾರುತಿ ಸೇವಾ ನಗರದ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಆಟೋ ಟಿಪ್ಪರ್ ಹಾಜರಾತಿ ಹಾಗೂ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಈ ಪರಿಶೀಲನೆ ಸಮಯದಲ್ಲಿ ಡ್ರೈವರ್ ಮತ್ತು ಲೋಡರ್ ಕೈಗವಸವನ್ನು ಕಡ್ಡಾಯವಾಗಿ ಧರಿಸಲು ಹಾಗೂ ಪರಿಶೀಲನೆ ವೇಳೆ ಕಂಡುಬಂದ ಎಲ್ಲ ಬ್ಲಾಕ್ ಸ್ಪಾಟ್‌ಗಳನ್ನು ತಕ್ಷಣ ತೆರವುಗೊಳಿಸಿ, ರಸ್ತೆ ಸ್ವಚ್ಛಗೊಳಿಸಬೇಕು ಎಂದು ಹೇಳಿದರು.
ಇನ್ನು ಒಣ ಕಸ ಮತ್ತು ಹಸಿ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ವಿಲೇವಾರಿ ಮಾಡಬೇಕು ಎಂದು ಆಟೋ ಟಿಪ್ಪರ್ ಚಾಲಕರಿಗೆ ಸೂಚನೆ ನೀಡಿದರು.
ಇತೆಗೆ ನಗರದ ಸ್ವಚ್ಛತೆ ಕಾಪಾಡಲು ಪ್ರತಿದಿನವೂ ನಗರ ಪಾಲಿಕೆಯ ಸಿಬ್ಬಂದಿ ತಂಡ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಇದೇ ವೇಳೆ ಪೊಮ್ಮಲ ಸುನೀಲ್ ಕುಮಾರ್ ಮನವಿ ಮಾಡಿದರು.
ಈ ವೇಳೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಸರ್ವಜ್ಞನಗರ ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಗಳು ಇದ್ದರು.

Related








