ಬೆಂಗಳೂರು: ದೇಶದಲ್ಲೇ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದ್ದು, ಆದಾಯದ ಪಾಲನ್ನು ಕೊಡುವಾಗ ಅನ್ಯಾಯ ಮಾಡಲಾಗುತ್ತಿದೆ. ಆದರೆ ಈ ಬಾರಿ 16ನೇ ಹಣಕಾಸು ಆಯೋಗವು ರಾಜ್ಯಕ್ಕೆ ನ್ಯಾಯಯುತವಾದ ಪಾಲನ್ನು ಕೊಡಬೇಕು, ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರೆ ಭಾಗಗಳ ಅಭಿವೃದ್ಧಿಯನ್ನು ಗಮನಿಸಬೇಕು ಎಂದು ಕರ್ನಾಟಕ ಆಮ್ ಆದ್ಮಿ ಪಾರ್ಟಿ ಹಣಕಾಸು ಆಯೋಗಕ್ಕೆ ಮನವಿ ಮಾಡಿದೆ.
ನಗರದಲ್ಲಿ ನಿನ್ನೆ ನಡೆದ 16 ನೇ ಹಣಕಾಸು ಆಯೋಗ ಆಯೋಜಿಸಿದ್ದ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ನಿಯೋಗ ಭಾಗವಹಿಸಿತ್ತು. ರಾಜ್ಯ ಖಜಾಂಚಿ ಪ್ರಕಾಶ್ ನೆಡಂಗಡಿ ಆಯೋಗದ ಅಧ್ಯಕ್ಷ ಅರವಿಂದ್ ಪನಗಡಿಯಾ ರೊಂದಿಗೆ ವಿವರವಾಗಿ ಚರ್ಚಿಸಿ ಪಕ್ಷದ ಪರವಾಗಿ ಮನವಿಯನ್ನು ಸಲ್ಲಿಸಿದರು.
ನಂತರ ಮಾತನಾಡಿದ ಪ್ರಕಾಶ್ “ರಾಜ್ಯದ ಆದಾಯದ ಪಾಲು ನಿರ್ಧರಿಸಲು ಹಣಕಾಸು ಆಯೋಗ ಇತರೆ ರಾಜ್ಯಗಲಳಲ್ಲಿ ಸರಾಸರಿ ತಲಾ ಆದಾಯ ಎಷ್ಟು ಕಡಿಮೆಯಾಗಿದೆ ಎನ್ನುವುದಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಿಗೆ ತಲಾ ಆದಾಯ ಹೆಚ್ಚಿದೆ ಎಂದು ಕಾರಣ ನೀಡಿ ಆದಾಯದ ಪಾಲು ಕಡಿಮೆ ಸಿಗುತ್ತದೆ. 14 ಮತ್ತು 15ನೇ ಹಣಕಾಸು ಆಯೋಗಗಳ ನಡುವೆ ಆದಾಯ ಹಂಚಿಕೆ 4.7% ರಿಂದ 3.6% ಕ್ಕೆ ಕಡಿಮೆಯಾಗಿದ್ದು ರಾಜ್ಯಕ್ಕೆ ₹70,000 ಕೋಟಿ ನಷ್ಟವಾಗಿದೆ” ಎಂದು ಹೇಳಿದರು.
ಕರ್ನಾಟಕದ ತಲಾದಾಯ ಲೆಕ್ಕಹಾಕುವ ವಿಧಾನವೇ ತಪ್ಪಾಗುತ್ತಿದೆ, ಬೆಂಗಳೂರು ನಗರ ಹೆಚ್ಚಿನ ಅಭಿವೃದ್ಧಿ ಸಾಧಿಸಿದ್ದು, ಹೆಚ್ಚು ತಲಾದಾಯ ಹೊಂದಿದೆ. ಆದರೆ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ತಲಾದಾಯ ಲೆಕ್ಕ ಹಾಕಿದರೆ ಬಿಹಾರ ಮತ್ತು ಉತ್ತರ ಪ್ರದೇಶಗಳಂತೆ ಬಡವರು ಸಿಗುತ್ತಾರೆ ಎಂದರು.
ಹಣಕಾಸು ಆಯೋಗವು ಕಡಿಮೆ ಆದಾಯ ಇರುವುದನ್ನು ಅರ್ಥ ಮಾಡಿಕೊಳ್ಳಬೇಕು, ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ನೀಡುವಂತೆ ಹೆಚ್ಚುವರಿ ಆದಾಯವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಇದರಿಂದಾಗಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಕೃಷಿ, ರೈತರ ಪ್ರಗತಿ, ಸಣ್ಣ ಉದ್ಯಮಗಳು ಮತ್ತು ಕೈಗಾರಿಕೆಗಳು ಬೇರೆ ಜಿಲ್ಲೆಗಳಲ್ಲೂ ಆಗಬೇಕು ಇದರಿಂದ ಬೆಂಗಳೂರಿಗೆ ಅತಿಯಾದ ವಲಸೆ ತಡೆಯಬಹುದು ಎಂದರು.
ಜನಸಂಖ್ಯೆಯ ಬೆಳವಣಿಗೆಯ ದರಗಳು ಹೆಚ್ಚಿರುವ ಇತರ ರಾಜ್ಯಗಳಿಗಿಂತ ಕರ್ನಾಟಕದ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವ ಸಂಗತಿಯನ್ನು ಹಣಕಾಸು ಆಯೋಗದ ಗಮನಕ್ಕೆ ತಂದಿದ್ದೇವೆ. ವಯಸ್ಸಾದವರ ಕಾಳಜಿ ಮಾಡಲು, ರಾಜ್ಯದಿಂದ ಕೇಂದ್ರೀಕೃತ ಸಂಪನ್ಮೂಲಗಳ ಅಗತ್ಯವಿರುತ್ತದೆ ಆದಾಯದ ಹಂಚಿಕೆ ಸಮಯದಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು. ಅರವಿಂದ್ ಪನಗಡಿಯ ಈ ಬಾರಿ ರಾಜ್ಯಕ್ಕೆ ಹೆಚ್ಚಿನ ಪಾಲು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಾಶ್ ನೆಡುಂಗಾಡಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಎಪಿ ಕರ್ನಾಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ದರ್ಶನ್ ಜೈನ್ ಮಾತನಾಡಿ, ಭಾರತದ ಸ್ಟಾರ್ಟ್‌ಅಪ್ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರನ್ನು ಮೆಟ್ರೋಪಾಲಿಟನ್ ಸಿಟಿ ಎಂದು ಘೋಷಿಸಬೇಕು ಎಂದರು.
ಕರ್ನಾಟಕವು ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ ಸೂಚಕಗಳಲ್ಲಿ ರಾಷ್ಟ್ರದ ಪ್ರಮುಖ ರಾಜ್ಯವಾಗಿದೆ. ಆದರೂ ರಾಷ್ಟ್ರೀಯ ಆದಾಯದ ಹಂಚಿಕೆ ಕಡಿಮೆಯಾಗಿರುವುದು ರಾಜ್ಯಕ್ಕೆ ಮಾಡಿದ ಅನ್ಯಾಯ. 16 ನೇ ಹಣಕಾಸು ಆಯೋಗವು ಇದನ್ನು ಪರಿಹರಿಸುವ ಅಗತ್ಯವಿದೆ ಇದರಿಂದ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದ್ದು, ರಾಷ್ಟ್ರದ ಬೆಳವಣಿಗೆಗೂ ಹೆಚ್ಚಿನ ಕೊಡುಗೆ ನೀಡಲು ಅನುಕೂಲವಾಗುತ್ತದೆ ಎಂದರು.