
ನ್ಯೂಡೆಲ್ಲಿ: ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸಲು ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಸೋಮವಾರ ನಡೆದ ಕಲಾಪದ ವೇಳೆ ಸಂಸದರಾದ ಕಂಗನಾ ರಣಾವತ್ ಮತ್ತು ಸಜ್ಜಾ ಅಹ್ಮದ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಚಿವರು ಸಂಸತ್‌ಗೆ ಈ ಮಾಹಿತಿ ನೀಡಿದರು.
ಕೇಂದ್ರ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸಿದೆಯೇ ಎಂದು ಕಂಗನಾ ರಣಾವತ್ ಮತ್ತು ಸಜ್ಜಾ ಅಹ್ಮದ್ ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ, ಎಂಟನೇ ವೇತನ ಆಯೋಗವನ್ನು ರಚಿಸಲು ಸರ್ಕಾರ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
8ನೇ ವೇತನ ಆಯೋಗದ ಶಿಫಾರಸು ಕೈಗೊಂಡು ಅಂಗೀಕರಿಸಿದ ನಂತರವೇ ಅದರ ಪರಿಣಾಮವನ್ನು ಮೌಲ್ಯಮಾಪನ ಮಾಡಬಹುದು ಎಂದು ತಿಳಿಸಿದರು.
8ನೇ ವೇತನ ಆಯೋಗ ರಚನೆ ಸಂಬಂಧ ರಕ್ಷಣಾ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ರಾಜ್ಯಗಳು ಸೇರಿದಂತೆ ಪ್ರಮುಖ ಪಾಲುದಾರರಿಂದ ಉಲ್ಲೇಖಿತ ನಿಯಮಗಳ ಕುರಿತು ಸಲಹೆ ಕೋರಲಾಗಿದೆ ಎಂದು ಸಚಿವರು ಸಂಸತ್‌ಗೆ ಮಾಹಿತಿ ನೀಡಿದರು.