ಬೆಂಗಳೂರು: ಕಳೆದ 2020ರ ಜನವರಿ 1ರಿಂದ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ 38 ತಿಂಗಳುಗಳ ಹಿಂಬಾಕಿ ಕೊಡದಿರುವುದಕ್ಕೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದನ್ನು ಅರಿತ ಸರ್ಕಾರ ಇನ್ನು ಆರು ತಿಂಗಳುಗಳ ಕಾಲ ನೌಕರರು ಯಾವುದೇ ಮುಷ್ಕರ ನಡೆಸದಂತೆ ಜೂನ್ ತಿಂಗಳಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮಧ್ಯೆ ವಿಧಾನಸಭೆ ಅಧಿವೇಶನ ಮುಗಿತಿದ್ದಂತೆ ಸಾರಿಗೆ ಮುಷ್ಕರ ಮಾಡಲಾಗುವುದು ಎಂದು ಗಾಳಿ ಸುದ್ದಿಯನ್ನು ಕೆಲವರು ಹರಿಯಬಿಟ್ಟಿದ್ದು, ಇಂಥ ಯಾವುದೇ ತೀರ್ಮಾನಕ್ಖೂ ನೌಕರರು ಬಂದಿಲ್ಲ. ಹೀಗಾಗಿ ಇಂಥ ವಿಷಯಗಳಿಗೆ ಯಾವ ನೌಕರರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದು ಬರಿ ಪ್ರಚಾರದ ಗಿಮಿಕ್ ಅಷ್ಟೆ.
ಹೌದು! ಅಧಿಕಾರಿಗಳು ಸೇರಿದಂತೆ 1.25 ಲಕ್ಷ ನೌಕರರಿಗೆ 38 ತಿಂಗಳುಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಈವರೆಗೂ ನೀಡಿಲ್ಲ. ಜತೆಗೆ 2024ರ ಜನವರಿ 1ರಿಂದ ಮತ್ತೆ ವೇತನ ಪರಿಷ್ಕರಣೆ ಆಗಬೇಕಿದ್ದು, ಅದು ಕೂಡ 7 ತಿಂಗಳುಗಳು ಕಳೆಯುತ್ತ ಬಂದರೂ ಈವರೆಗೂ ಯಾವುದೇ ಮಾತುಕತೆಗೆ ಸರ್ಕಾರ ಮುಂದಾಗಿಲ್ಲ. ಹೀಗಾಗಿ ನೌಕರರ ಪರ ಸಂಘಟನೆಗಳು ಪ್ರತಿಭಟನೆ ಮಾಡುವುದಕ್ಕೆ ಒಂದು ತಿಂಗಳ ಹಿಂದ ಅಣಿಯಾಗುತ್ತಿದ್ದವು.
ಆದರೆ, ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ, ಪ್ರತಿಭಟನೆ, ಹರತಾಳ ಹಾಗೂ ಅಸಹಕಾರ ಚಳವಳಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಅದಷ್ಟೇ ಅಲ್ಲದೇ ಮುಂದಿನ ಆರು ತಿಗಳುಗಳು ಯಾವುದೇ ಸಮಸ್ಯೆಗಳಿದ್ದರೂ ಸಹ ಪ್ರತಿಭಟನೆ ನಡೆಸುವಂತ್ತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಂದು ಹೊರಡಿಸಿದ್ದ ಸರ್ಕಾರ ಅಧಿಸೂಚನೆಗೆ ಸಾರಿಗೆ ನೌಕರರು ಆಕ್ರೋಶಚನ್ನು ಹೊರಹಾಕಿದ್ದರು. ಆದರೆ, ಸರ್ಕಾರದ ಆದೇಶ ಮೀರಿ ಸಂಘಟನೆಗಳಾಗಲಿ, ನೌಕರರಾಗಲಿ ಮುಷ್ಕರ ಮಾಡುವ ಸಾಹಸ ಮಾಡುವ ಪರಿಸ್ಥಿತಿಯಲ್ಲಿ ಸದ್ಯಕ್ಕಿಲ್ಲ. ಕಾರಣ ಒಂದು ಮನೆ 10 ಬಾಗಿಲು ಎಂಬ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಈಗಾಗಲೇ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮವನ್ನು ಈವರೆಗೂ ತೆಗೆದುಕೊಂಡಿಲ್ಲ. ಇದೇ ಕಾರಣಕ್ಕೆ ಈ ಹಿಂದೆಯೂ ಸರ್ಕಾರದ ವಿರುದ್ಧ ನೌಕರರು ತಿರುಗಿಬಿದ್ದಿದ್ದರು. ಆದರೆ ಇಂದು ತಿರುಗಿ ಬೀಳುವ ಸ್ಥಿತಿಯಲ್ಲಿ ನೌಕರರಿಲ್ಲ.
ಇನ್ನು ಅಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸತತವಾಗಿ 15ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆಗ ಸಾರಿಗೆ ನೌಕರರೊಡನೆ ಮಾತುಕತೆ ನಡೆಸಿದ್ದ ವಿಪಕ್ಷ ಸ್ಥಾನದಲ್ಲಿದ್ದ ಇದೇ ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿತ್ತು.
ಆದರೆ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದ್ದರೂ ನೌಕರರ ಬಗ್ಗೆ ಯಾವುದೇ ಆಸಕ್ತಿ ತೋರಿಸಿಲ್ಲ. ಇನ್ನು ಇತ್ತ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಜತೆಗೆ, ಶಕ್ತಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ನೌಕರರ ಹಿತಾಸಕ್ತಿಯನ್ನೂ ಸಹ ಕಡೆಗಣಿಸುತ್ತಿದೆ ಈ ಸರ್ಕಾರ ಎಂಬ ಆರೋಪ ಕೇಳಿಬಂದಿದೆ.
ಈ ಎಲ್ಲದರ ನಡುವೆಯೂ ಈಗ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವ ಅವಕಾಶಕ್ಕೂ ಸಹ ತಡೆಯೊಡ್ಡಿದೆ. ಇನ್ನು ಈ ಬಗ್ಗೆ ಕೆಲ ಸಂಘಟನೆಗಳ ಮುಖಂಡರೆ ಸರ್ಕಾರಕ್ಕೆ ಈ ರೀತಿ ಮಾಡಿ ಎಂದು ಸಲಹೆ ನೀಡಿರುವುದರಿಂದ ಈ ರೀತಿ ಸರ್ಕಾರ ಆದೇಶ ಮಾಡಿದೆ ಎಂದು ಬಹುತೇಕ ಎಲ್ಲ ನೌಕರರು ಆರೋಪ ಮಾಡುತ್ತಿದ್ದಾರೆ.
ಇನ್ನು ಕಳೆದ ಜೂನ್ 15ರಂದು ನಾಲ್ಕೂ ನಿಗಮಗಳ ಎಂಡಿಗಳ ಜತೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವ ಸಂಬಂಧ ಸಭೆ ಕರೆದಿದ್ದ ಸರ್ಕಾರ ಅದನ್ನು ಮುಂದೂಡಿದೆ. ಇದರ ಹಿಂದೆಯೂ ನೌಕರರ ಕೆಲ ಸಂಘಟನೆಗಳು ಮೂಗು ತೂರಿಸಿ ಆಗುವ ಕೆಲಸಕ್ಕೂ ತಡೆಯಾಗಿ ನಿಂತಿವೆ ಎಂಬ ಆರೋಪವು ನೌಕರರಿಂದ ಕೇಳಿ ಬಂದಿದೆ.
ಈ ಎಲ್ಲದರ ನಡುವೆ ಮತ್ತೆ ಅಂದರೆ ವಿಧಾನಸಭೆ ಅಧಿವೇಶನ ಮುಗಿತಿದ್ದಂತೆ ಸಾರಿಗೆ ಮುಷ್ಕರ ಮಾಡಲಾಗುವುದು ಎಂಬ ಸುದ್ದಿ ಹರಿಯ ಬಿಟ್ಟಿರುವುದು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳವ ತಂತ್ರವಾಗಿ ಎಂದು ನೌಕರರು ಕಿಡಿಕಾರಿದ್ದು, ಇದಕ್ಕೆ ನಾವು ಸಿದ್ದರಿಲ್ಲ ಹೇಳಿಕೆ ಕೊಟ್ಟಿರುವವರು ಈಗ ಸಮಾಜಾಯಿಷಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.