ಬೆಂಗಳೂರು: ನಗರವನ್ನು ಹಸಿರುಮಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಉತ್ತಮ ಯೋಜನೆಯನ್ನು ರೂಪಿಸಿ ಮುಂದಿನ ಪೀಳಿಗೆ ಉತ್ತಮ ಪರಿಸರ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅರಣ್ಯ ವಿಭಾಗದ ವಿಶೇಷ ಆಯುಕ್ತರು ಹಾಗೂ ಹಸಿರು ಬೆಂಗಳೂರಿನ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ “ಹಸಿರು/ ಪರಿಸರ ಬೆಂಗಳೂರು” ವಿಷಯಕ್ಕೆ ಸಂಬಂಧಿಸಿದಂತೆ ಆರ್.ವಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರು ನಗರವನ್ನು ಹರಿಸು ಬೆಂಗಳೂರನ್ನಾಗಿಸುವ ಉದ್ದೇಶದಿಂದ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳಡಿ ಬರುವ ಹಸಿರು ಬೆಂಗಳೂರನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಅದರಂತೆ ಮುಂದಿನ 25 – 30 ವರ್ಷಗಳಲ್ಲಿ ಸಂಪೂರ್ಣ ಬೆಂಗಳೂರನ್ನು ಹಸಿರುಮಯವಾಗಿಸಬೇಕು. ಈ ಸಂಬಂಧ ನಾಗರಿಕರಿಂದ ಬಂದಂತಹ ಸಲಹೆಗಳನ್ನೆಲ್ಲಾ ಅಧ್ಯಯನ ನಡೆಸಿ ಕ್ರೋಢೀಕರಿಸಿ ಉತ್ತಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಈಗಾಗಲೇ ಶಾಲಾ-ಕಾಲೇಜು ಶೈಕ್ಷಣಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು, ಸಸಿಗಳನ್ನು ನೆಟ್ಟು ಅವು ಬೆಳೆಯುವವರೆಗೆ ಪೋಷಣೆ ಮಾಡಲು ವಿದ್ಯಾರ್ಥಿಗಳಿಗೆ ಜವಾಬ್ದಾರಿಯನ್ನು ನೀಡಿ ಆ ಸಸಿಗೆ ವಿದ್ಯಾರ್ಥಿಗಳ ಹೆಸರನ್ನು ಶಾಶ್ವತವಾಗಿ ಇಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಹಸಿರು ಬೆಂಗಳೂರು ವಿಷಯವಾಗಿ ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು: • ನಗರದ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದು. • ಕೆರೆಗಳಿಗೆ ಕಲುಷಿತ ನೀರು ಸೇರದಂತೆ ಕ್ರಮವಹಿಸುವುದು.
• ಶೇ. 100 ರಷ್ಟು ತ್ಯಾಜ್ಯ ನೀರು ಶುದ್ಧೀಕರಣ ಹಾಗೂ ಶುದ್ಧೀಕರಣ ಘಟಕಗಳನ್ನು ವಿಕೇಂದ್ರಿಕರಿಸುವುದು. • ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು.
• ಅಪಾರ್ಟ್ಮೆಂಟ್ ಗಳಿಗೆ ಕಡ್ಡಾಯವಾಗಿ ಎಸ್.ಟಿ.ಪಿ ಗಳ ನಿರ್ಮಾಣ ಮಾಡುವುದು. • ಆರ್ಕಿಟೆಕ್ಟ್ ಗಳಿಗೆ ಮರ/ಸಸಿಗಳನ್ನು ಕಡಿಯದೆ ಅವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿನ್ಯಾಸ ರೂಪಿಸಬೇಕು.
• ನಗರದಲ್ಲಿ ನೆಡುವಂತಹ ಸಸಿಗಳು ಉಳಿದಿವೆಯೇ ಅಥವಾ ನಾಶವಾಗಿದಿಯೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನಿಟ್ಟುಕೊಳ್ಳಬೇಕು. • ನಗರದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನ ಹಾಗೂ ನಿರ್ವಹಣೆ ಮಾಡುವುದು.
• ಅಂತರ್ಜಲ ಪುನಶ್ಚೇತನ ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. • ಪರಿಸರವನ್ನು ಉಳಿಸುವ ಬಗ್ಗೆ ನಾವೆಲ್ಲರೂ ಮಕ್ಕಳಿಗೆ ಮನೆಯಿಂದಲೇ ಪರಿಸರ ಉಳಿಸುವ ಬಗ್ಗೆ ಶಿಕ್ಷಣ ನೀಡಿ ಸಸಿಗಳನ್ನು ಪೋಷಿಸಿ ಬೆಳೆಸುವ ಕುರಿತು ಜಾಗೃತಿ ಮೂಡಿಸಬೇಕು.
• ಬಿಬಿಎಂಪಿ, ಜಲಮಂಡಳಿ, ಬಿಡಿಎ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಪರಿಸರವನ್ನು ವೃದ್ಧಿಸಬೇಕು.
• ನಗರದಲ್ಲಿ ವಾಹನಗಳಿಂದ ಸಾಕಷ್ಟು ವಾಯುಮಾಲಿನ್ಯವಾಗಲಿದ್ದು, ಹೊಸ ವಾಹನಗಳನ್ನು ಕೊಳ್ಳುವ ಸಮಯದಲ್ಲಿ ಸಸಿ ಗಳನ್ನು ಉಡುಗೊರೆಯಾಗಿ ನೀಡಿ ಅವುಗಳನ್ನು ಪೋಷಿಸಿ ಬೆಳೆಸಲು ಜಾಗೃತಿ ಮೂಡಿಸುವುದು.
• ಅಭಿವೃದ್ಧಿಯಾಗದಂತಹ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ರೂಪಿಸುವುದು. • ನಗರದ ರಸ್ತೆ ಬದಿ, ಉದ್ಯಾನ, ಮನೆಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್, ಕೆರೆಗಳ ವಿಭಾಗದ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಆರ್ ವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಎನ್ ಸುಬ್ರಮಣ್ಯ, ಪಾಲಿಕೆಯ ಅರಣ್ಯ, ತೋಟಗಾರಿಕೆ ವಿಭಾಗದ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.