ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ತುರುವೇಕೆರೆ ಘಟಕಗಳಲ್ಲಿ ವಾಹನವೊಂದು ಜಖಂಗೊಂಡಿತ್ತು ಆ ಜಖಂಗೊಂಡಿದ್ದನ್ನು ರಿಪೇರಿ ಮಾಡಿದ ಖರ್ಚು ವೆಚ್ಚದ ಬಿಲ್‌ನಲ್ಲಿ ಅನುಪಯುಕ್ತ ವಸ್ತುಗಳ ಅಂದರೆ ಸ್ಕ್ರಾಪ್‌ನ ಹಣ ತೋರಿಸದೆ ಅಧಿಕಾರಿಗಳು ಸಂಸ್ಥೆಗೆ ಲಾಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಸ್ಥೆಯ ಎಂಡಿ ಅವರಿಗೆ ಎಸ್.ಎಲ್.ಲೋಕೇಶ್ ಹುಳಿಯಾರ್ ಎಂಬುವರು ದೂರು ನೀಡಿದ್ದಾರೆ.
ಇ ಮೇಲ್ ಮೂಲಕ ದೂರು ನೀಡಿರುವ ಅವರು, ನಿಮಗೆ ಕಳಿಸಿರುವ ಬಿಲ್‌ನಲ್ಲಿ ವಾಹನ ಸಂಖ್ಯೆ ಕೆಎ 06 f 1268 ದುರಸ್ತಿ ವೆಚ್ಚಕ್ಕಾಗಿ ಚಾಲಕರಿಗೆ ಮೆಮೋ ನೀಡಿದ್ದಾರೆ. ಇಲ್ಲಿ ವಾಹನಕ್ಕೆ ಬಳಸಿರುವ ಎಲ್ಲ ವಸ್ತುಗಳ ದರಪಟ್ಟಿ ನೀಡಿದ್ದು ಅತಿ ಕಡಿಮೆ ಪ್ರಮಾಣದ 70 ಪೈಸೆಯ ಸ್ಕ್ರೂನ ವೆಚ್ಚವನ್ನು ಸೇರಿಸಿದ್ದಾರೆ. ಅದರ ಜತೆಗೆ ಲೇಬರ್ ವೆಚ್ಚ ಸೇರಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಆದರೆ, ಮುಖ್ಯವಾಗಿ ಈ ರೀತಿ ವಾಹನವು ಜಖಂ ಆದಾಗ ಬದಲಾಯಿಸಿರುವ ಬಿಡಿ ಭಾಗಗಳು ಹಾಗೂ ಕವಚದ ಸೀಟನ್ನು ಸ್ಕ್ರಾಪ್ ಅನುಪಯುಕ್ತ ವಸ್ತುಗಳು ಎಂದ್ದು ಪಟ್ಟಿ ಮಾಡಬೇಕು. ಅಂದರೆ ಸ್ಕ್ರಾಪ್ ವಸ್ತುಗಳನ್ನು ತೂಕದ ಲೆಕ್ಕಕ್ಕೆ ಪರಿಗಣಿಸಿ ಬಿಲ್‌ನಲ್ಲಿ ಅದನ್ನು ಕಡಿತಗೊಳಿಸುವುದು ವಿಭಾಗಿಯ ಯಾಂತ್ರಿಕ ಅಭಿಯಂತರ ಕೆಲಸ.
ಆದರೆ ಪ್ರತಿ ಚಿಕ್ಕ ವಸ್ತುವನ್ನು ಬಿಲ್‌ನಲ್ಲಿ ಸೇರಿಸಿದ್ದು ಈ ವಾಹನದ 50 ಕೆಜಿಗೂ ಹೆಚ್ಚಿನ ಪ್ರಮಾಣದ ಸ್ಕ್ರಾಪ್ ಅನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಹಲವು ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತಿದೆ. ನಾನು ಗಮನಿಸಿರುವಂತೆ ನಮ್ಮ ಕೆಲವು ಸ್ನೇಹಿತರು ದ್ವಿಚಕ್ರ ವಾಹನದ ಮೆಕಾನಿಕ್ ಶಾಪ್‌ಗಳನ್ನು ಇಟ್ಟಿದ್ದು ಅವರು ಪ್ರತಿ ವರ್ಷವೂ 1.5 ಲಕ್ಷ ರೂ.ಗಳಿಂದ ಎರಡು ಲಕ್ಷ ರೂಗಳವರೆಗೂ ಅನುಪಯುಕ್ತ ವಸ್ತುಗಳನ್ನು ಸ್ಕ್ರಾಪ್‌ಗೆ ಹಾಕುತ್ತಾರೆ.
ಅದೇ ರೀತಿ ಸಾರಿಗೆ ನಿಗಮಗಳ ಘಟಕದಲ್ಲಿ ನೂರಾರು ವಾಹನಗಳ ರಿಪೇರಿಯಿಂದ ಪ್ರತಿ ವರ್ಷವೂ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಕ್ರಾಪ್ ಸಂಗ್ರಹವಾಗುತ್ತಿದ್ದು ಅದನ್ನು ಎಲ್ಲಿಯೂ ಯಾವುದೇ ಘಟಕದಲ್ಲೂ ಅದರ ಲೆಕ್ಕವನ್ನು ಇಟ್ಟಿಲ್ಲ. ಅಂದರೆ ಇದರ ಅರ್ಥ ಏನು? ಸ್ಕ್ರಾಪ್ ಅನುಪಯುಕ್ತ ವಸ್ತುಗಳು ಎಲ್ಲಿಗೆ ಹೋಗುತ್ತಿವೆ. ಅದರಿಂದ ಬರುತ್ತಿರುವ ಹಣ ಯಾರ ಜೇಬು ಸೇರುತ್ತಿದೆ ಎಂಬುವುದು ಗೊತ್ತಿಲ್ಲ.
ಇದೇ ರೀತಿ ಹಲವು ಘಟಕಗಳಲ್ಲಿ ತಾಂತ್ರಿಕ ಸಿಬ್ಬಂದಿಗಳು ಘಟಕದ ಕಸ ತುಂಬುವ ನೆಪದಲ್ಲಿ ಸ್ಕ್ರಾಪ್ ವಸ್ತುಗಳನ್ನು ಗುಜರಿಗೆ ಹಾಕುತ್ತಿರುವುದರ ವಿರುದ್ಧ ಈಗಾಗಲೇ ಹಲವು ಕಡೆ ಪ್ರಕರಣಗಳು ದಾಖಲಾಗಿದ್ದರೂ ಸರಿಯಾದ ವಿಚಾರಣೆ ಹಾಗೂ ತನಿಖೆ ಇಲ್ಲದೆ ಮುಚ್ಚಿ ಹೋಗುತ್ತಿವೆ.
ಅದಕ್ಕೆ ಘಟಕ ವ್ಯವಸ್ಥಾಪಕರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಭದ್ರತಾ ಅವಲ್ದಾರು ಕೈಜೋಡಿಸಿ ಸಂಸ್ಥೆಯ ಲಕ್ಷಾಂತರ ಹಣವನ್ನು ಲಪಟಾಯಿಸುತ್ತಿರುವುದು. ಅದೇ ರೀತಿ ವಿಭಾಗಿಯ ಮಟ್ಟದಲ್ಲಿ ಮತ್ತು ಕೆಂಗೇರಿ ಹಾಗೂ ಹಾಸನದ ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಸ್ಕ್ರಾಪ್ ಎಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನಿಸದೇ ಇರುವುದರಿಂದ ಇದರಲ್ಲಿ ತುಂಬಾ ಅವ್ಯವಹಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ.
ಪ್ರತಿ ವಾಹನದ ರಿಪೇರಿಯ ನಂತರ ಅದಕ್ಕೆ ಖರ್ಚಾಗಿರುವ ವೆಚ್ಚವನ್ನು ಮಾತ್ರ ಚಾಲಕರಿಗೆ ನೀಡುತ್ತಾ ಬಂದಿದ್ದು ಅದರಿಂದ ಬಂದಿರುವ ಸ್ಕ್ರಾಪ್ ಅನ್ನು ಅವರ ಬಿಲ್‌ನಲ್ಲಿ ಕಡಿತಗೊಳಿಸದಿರುವುದು ಅದನ್ನು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕೆಂದು ತುಮಕೂರು ವಿಭಾಗದ ವಿಭಾಗೀಯ ಕಾರ್ಯಾಗಾರದಲ್ಲಿ ವಿಚಾರಿಸಿದಾಗ ಅವರು ನಾವು ಅದಕ್ಕೆ ಖರ್ಚಾದ ವೆಚ್ಚವಷ್ಟನ್ನು ಚಾಲಕರಿಂದ ಕಡಿತಗೊಳಿಸುವುದಿಲ್ಲ ಕೇವಲ 10 ರಿಂದ 20 ಸಾವಿರ ರೂ.ಗಳನ್ನು ಮಾತ್ರ ಅವರಿಂದ ವಸೂಲಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಕೆಲವು ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಈ ಪ್ರಕರಣಗಳಿಗೆ ಇದಕ್ಕಾಗಿ ಶಾಶ್ವತ ವಾರ್ಷಿಕ ಭಡ್ತಿಯನ್ನು ಕಡಿತಗೊಳಿಸುವುದರಿಂದ ಚಾಲಕರು ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿಯವರೆಗೂ ಸ್ಕ್ರಾಪ್ ಅನ್ನು ಟೆಂಡರ್ ಕರೆದು ಆ ಮುಖಾಂತರ ಮಾರಾಟ ಮಾಡಿರುವ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಿ ಮುಂದೆ ಆಗುವಂತಹ ಅಪಘಾತ ಪ್ರಕರಣಗಳಲ್ಲಿ ವಾಹನದ ಜಖಂ ವೆಚ್ಚ ಬಿಲ್ ಮಾಡುವ ಸಂದರ್ಭದಲ್ಲಿ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಸಾರಿಗೆ ಬಸ್‌ಗಳು ಜಖಂ ಆದಾಗ ಅದಕ್ಕೆ ಬಸ್‌ನ ವಿಮೆಯಿಂದ ಆ ವೆಚ್ಚವನ್ನು ಬರಿಸಿಕೊಳ್ಳಬೇಕು. ಆದರೆ ಇಲ್ಲಿ ಅಧಿಕಾರಿಗಳು ಆ ವೆಚ್ಚದಲ್ಲಿ ಇಂತಿಷ್ಟು ಎಂದು ಅಂದರೆ 10 ಸಾವಿರದಿಂದ 20 ಸಾವಿರ ರೂ.ಗಳವರೆಗೆ ಚಾಲಕರಿಂದ ಕಡಿತ ಮಾಡುತ್ತಾರೆ. ಇಲ್ಲ ಚಾಲಕರ ಒಂದು ವರ್ಷ ಇಂಕ್ರಿಮೆಂಟ್‌ಅನ್ನೇ ತೆಗೆದು ಬಿಡುತ್ತಾರೆ. ಇದರಿಂದ ಚಾಲಕರಿಗೆ ಭಾರಿ ನಷ್ಟವಾಗುತ್ತಿದೆ.
ಏಕೆ ಹೀಗೆ ಗೊತ್ತಾಗುತ್ತಿಲ್ಲ. ವಾಹನದ ಇನ್ಶೂರೆನ್ಸ್ ಮಾಡಿಸುವುದು ಅಪಘಾತ ಸಂಭವಿಸಿದರೆ ಆ ಅಪಘಾತದಿಂದ ಆಗುವ ಆರ್ಥಿಕ ನಷ್ಟ ಬರಿಸುವುದಕ್ಕೆ ಅಲ್ಲವೇ. ಆದರೂ ಈ ರೀತಿ ಚಾಲಕರ ಮೇಲೆ ಏಕೆ ಹಾಕುತ್ತಿದ್ದಾರೆ. ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಚಾಲನಾ ಸಿಬ್ಬಂದಿಗಳ ಸ್ಥಿತಿ ಗರಗಸಕ್ಕೆ ಸಿಕ್ಕ ಮರದಂತಾಗಿದೆ.