ಹಾಸನ್: ಶಾಸಕ ಎಚ್.ಡಿ.ರೇವಣ್ಣ ಫ್ಯಾಮಿಲಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿಂದೆ ಪತ್ನಿ ಭವಾನಿ ರೇವಣ್ಣ ಮಾಡಿದ ಯಡವಟ್ಟಿಗೆ ರೇವಣ್ಣ ಕ್ಷಮೆ ಕೇಳಿದ್ರು. ಆದ್ರೀಗ ದೊಡ್ಡ ಗೌಡರ ಕುಟುಂಬದ ವಿರುದ್ಧ ಆಸ್ತಿ ಕಬಳಿಕೆಯ ಆರೋಪ ಕೇಳಿ ಬಂದಿದೆ.
ರೇವಣ್ಣನವರ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಆರೋಪ ಮಾಡಿರೋದು ಈಗ ಸಂಚಲನಕ್ಕೆ ಕಾರಣವಾಗಿದೆ. ರೇವಣ್ಣನ ಮನೆಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸ್ತಿದ್ದ ಕಾರ್ತಿಕ್ ಆಸ್ತಿ ಮೇಲೆ ರೇವಣ್ಣ ಕುಟುಂಬ ಕಣ್ಣು ಹಾಕಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇದೇ ಕಾರಣಕ್ಕೆ ಕಾರ್ತಿಕ್ ಅವರನ್ನ ಅಪಹರಣ ಮಾಡಿ ಆಸ್ತಿ ಬರೆದುಕೊಡುವಂತೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕಾರ್ತಿಕ್ ಗಂಭೀರ ಆರೋಪ ಮಾಡಿದ್ದಾರೆ.
ಕಾರ್ತಿಕ್ ಪ್ರಜ್ವಲ್ ರೇವಣ್ಣ ಬಳಿ ಕಳೆದ 14 ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈತ ಚಾಲಕನಾಗಿದ್ದೂ ಸ್ಥಿತಿವಂತ. ಹೀಗಾಗಿ ಒಂದೂವರೆ ವರ್ಷದ ಹಿಂದೆ ಕಾರ್ತಿಕ್ ಜಮೀನು ಒಂದನ್ನುಖರೀದಿ ಮಾಡಿದ್ದು, ಆಗ ಈ ಜಮೀನು ಪೂಜೆಗೆ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಬಂದಿದ್ದರು.
ಈ ವೇಳೆ ಕಾರ್ತಿಕ್ ಜಮೀನಿನ ಮೇಲೆ ಪ್ರಜ್ವಲ್ ರೇವಣ್ಣ ಕಣ್ಣು ಬಿದ್ದಿದೆಯಂತೆ. ಬಳಿಕ ಈ ಜಮೀನು ಬರೆದುಕೊಡುವಂತೆ ಕೇಳಿದ್ದಾರೆ. ಆದರೆ, ಕಷ್ಟಪಟ್ಟು ದುಡಿದು ಕಾಸು ಕಾಸು ಕೂಡಿಟ್ಟು ನಾನು ಜಮೀನು ಖರೀದಿಸಿದ್ದೇನೆ ಹೀಗಾಗಿ ಕೊಡಲು ಆಗಲ್ಲ ಎಂದಿದ್ದರಂತೆ. ದೊಡ್ಡವರು ಕೇಳಿದರೆ ಕೊಡಲ್ಲ ಅಂದ್ರೆ ಏನಾಗುತ್ತೆ? ಕಾರ್ತಿಕ್ ವಿಚಾರದಲ್ಲೂ ಅದೇ ಆಗಿದ್ದುಜ, ಅಪಹರಣ ಮಾಡಿ ಆಸ್ತಿ ಬರೆದುಕೊಡುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಕಾರ್ತಿಕ್ ತೋಟದ ಅಕ್ಕಪಕ್ಕ ಸುಮಾರು 100 ರಿಂದ 120 ಎಕರೆ ಜಮೀನಿದೆ. ಆ ಜಮೀನು ಪಡೀಬೇಕಾದರೆ ಅದಕ್ಕೆ ಕಾರ್ತಿಕ್ ತೋಟ ಇವರ ವಶವಾಗಬೇಕು. ಹೀಗಾಗಿ ನನ್ನ ತೋಟವನ್ನು ಪಡೆಯೋ ಮೂಲಕ ಸುತ್ತಮುತ್ತ ಇರೋ 100 ಎಕರೆ ಜಮೀನು ಕಬಳಿಸೋಕೆ ರೇವಣ್ಣ ಫ್ಯಾಮಿಲಿ ಪ್ಲಾನ್ ಮಾಡಿದೆ ಅಂತ ಕಾರ್ತಿಕ್ ಆರೋಪ ಮಾಡಿದ್ದಾರೆ.
ಕಾರ್ತಿಕ್‌ನ ಜಮೀನು ಪೂಜೆಗೆ ಬಂದು ಹೋಗಿದ್ದ ರೇವಣ್ಣ ಕುಟುಂಬ ಪದೇಪದೆ ಜಮೀನು ಬರೆದುಕೊಡುವಂತೆ ಕಾರ್ತಿಕ್ಗೆ ಕಿರುಕುಳ ಕೊಟ್ಟಿದೆಯಂತೆ. ಮಾತ್ರವಲ್ಲ ಗರ್ಭಿಣಿಯಾಗಿದ್ದ ಕಾರ್ತಿಕ್ ಹೆಂಡತಿ ಮೇಲೆ ಭವಾನಿ ರೇವಣ್ಣ ಹಲ್ಲೆ ಮಾಡಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಇದಷ್ಟೆ ಅಲ್ಲದೇ ಮನೆಗೆ ಪೊಲೀಸರನ್ನು ಕರೆಸಿ ಬೆದರಿಕೆ ಹಾಕಿಸಿದ್ದಾರೆ ಅಂತ ಕಾರ್ತಿಕ್ ಗಂಭೀರ ಆರೋಪ ಮಾಡಿದ್ದಾರೆ. ದೂರುದಾರರ ಪರ ವಕೀಲರು ರೇವಣ್ಣ ಅವರ ಫ್ಯಾಮಿಲಿಯ ಮತ್ತಷ್ಟು ಅಕ್ರಮ ಬಯಲಿಗೆ ಬರುತ್ತೆ ಎಂದು ಹೇಳಿದ್ದಾರೆ.
ಈಗ ಕಾರ್ತಿಕ್ ಪೊಲೀಸರ ಮೊರೆ ಹೋಗಿದ್ದು, ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಾರ್ತಿಕ್ ಘಟನೆ ಸಂಬಂಧ ರಾಜ್ಯ ಡಿಜಿಪಿಗೆ ದೂರು ನೀಡಿದ್ದಾರೆ. ಇನ್ನು ಆರೋಪದ ಬಗ್ಗೆ ಶಾಸಕ ಎಚ್. ಡಿ. ರೇವಣ್ಣ, ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಇನ್ನು ನಿಜಕ್ಕೂ ಪ್ರಜ್ವಲ್ ರೇವಣ್ಣ ಚಾಲಕನ ಆಸ್ತಿ ಮೇಲೆ ಕಣ್ಣು ಹಾಕಿದ್ದರೆಯೆ? ಅಪಹರಿಸಿ ಹಲ್ಲೆ ಮಾಡಿದ್ದಾರಾ ಅನ್ನೋದು ಪೊಲೀಸ್ ತನಿಖೆಯಿಂದ ಬಯಲಗೆ ಬರಬೇಕಿದೆಯಷ್ಟೆ.