ರಾಯಚೂರು: ಶಿಕ್ಷಕರ ದಿನಚರಣೆಯ ಇಂದು ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ವಾಹನ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಸಮರ್ಥ (7) ಹಾಗೂ ಶ್ರೀಕಾಂತ ( 12) ಮೃತ ಬಾಲಕರು. ಇಂದು ಮುಂಜಾನೆ ಕಪ್‌ಗಲ್‌ನಿಂದ ಮಾನ್ವಿ ಪಟ್ಟಣದತ್ತ ಹೊರಟಿದ್ದ ಶಾಲಾ ವಾಹನ. ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ.
ಶಾಲಾ ವಾಹನ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾನ್ವಿ ಘಟಕದ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳ ಕಾಲುಗಳು ತುಂಡಾಗಿದ್ದು, 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಒಟ್ಟು 40 ಮಕ್ಕಳು ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಆ ಪೈಕಿ 18 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 14 ಮಕ್ಕಳ ಪೈಕಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.
ಆಸ್ಪತ್ರೆ ಮುಂದೆ ಪೋಷಕರು ಕಣ್ಣೀರು! ರಿಮ್ಸ್ ಆಸ್ಪತ್ರೆಗೆ ದೌಡಾಯಿಸಿದ ಪೋಷಕರು. ಮಕ್ಕಳು ಸ್ಥಿತಿ ನೋಡಿ ಕಣ್ಣೀರಾಕಿ ‘ದೇವ್ರೇ ನಮಗೆ ಯಾಕಿಂತ ಶಿಕ್ಷೆ ಎಂದು ಗೋಳಾಡುತ್ತಿದ್ದಾರೆ. ಕೂಲಿನಾಲಿ ಮಾಡಿ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಪೋಷಕರು. ಇದೀಗ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಮಕ್ಕಳ ಸ್ಥಿತಿ ಕಂಡು ಅವರ ಅಕ್ರಂದನ ಮುಗಿಲುಮುಟ್ಟುವಂತಿದೆ. ಸದ್ಯ ಎಲ್ಲ ಮಕ್ಕಳಿಗೂ ಚಿಕಿತ್ಸೆ ಮುಂದುವರಿದಿದೆ.
ಇಂದು ಶಿಕ್ಷಕರ ದಿನಾಚಣೆ ಹಿನ್ನೆಲೆ ಖುಷಿಯಿಂದ ಹೊರಟಿದ್ದ ವಿದ್ಯಾರ್ಥಿಗಳು. ಚಾಲಕನ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅತಿಯಾದ ವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಭೇಟಿ: ಅಪಘಾತ ಪ್ರಕರಣ ಮಾಹಿತಿ ಪಡೆದ ಜಿಲ್ಲಾಧಿಕಾರಿ ನಿತೀಶ್ ಕೆ. ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಇನ್ನೂ ಮೂವರ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆಉ.
ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 40 ವಿದ್ಯಾರ್ಥಿಗಳ ಪೈಕಿ 17 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಘೋಷಿಸಿದರು.