ಭೂತಾನ್: ಭಾರತೀಯರಿಗೆ ಚಿನ್ನಾಭರಣ ಅಂದ್ರೆ ಬಹಳ ಪ್ರೀತಿ, ಬಂಗಾರ ಖರೀದಿ ಮಾಡುವುದು ಮಾತ್ರವಲ್ಲದೆ ಬಂಗಾರದ ಮೇಲೆ ಹೂಡಿಕೆ ಕೂಡ ಮಾಡುತ್ತಾರೆ. ಯಾವುದೇ ಹಬ್ಬ ಹರಿದಿನಗಳು ಬರಲಿ ಮದುವೆ ಮುಂಜಿ ಮೊದಲಾದ ಶುಭ ಕಾರ್ಯಗಳು ನಡೆಯಲಿ ಭಾರತೀಯರು ಚಿನ್ನ ಖರೀದಿ ಮಾಡದೆ ಇರರು.
ಇನ್ನು ಭಾರತ ದೇಶದಲ್ಲಿ ಬಂಗಾರದ ಬೇಡಿಕೆ ಹೆಚ್ಚಿದ್ದು, ಬೇಡಿಕೆಯನ್ನು ಪೂರೈಸಲು ಶೇ.90ರಷ್ಟಕ್ಕಿಂತಲೂ ಹೆಚ್ಚು ಆಮದುಗಳ ಮೂಲಕ ಬೇಡಿಕೆ ಪೂರೈಕೆ ಮಾಡಲಾಗುತ್ತಿದೆ. ಮಾಹಿತಿಯ ಪ್ರಕಾರ 2022 ರಲ್ಲಿ 706 ಟನ್ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಇದಕ್ಕೆ ಖರ್ಚಾಗಿರುವ ಮೊತ್ತ 36.6 ಶತಕೋಟಿ ಡಾಲರ್ಗಳು ಎಂದು ಹೇಳಲಾಗುತ್ತಿದೆ.
ಇಂದು ನಮ್ಮ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಲೇ ಇದೆ. ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ಚಿನ್ನದ ಮೇಲೆ ತೆರಿಗೆ ಕೂಡ ಜಾಸ್ತಿ. ಇಂದು ಸುಮಾರು 10 ಗ್ರಾಂ ಚಿನ್ನಕ್ಕೆ 55100 ರೂಪಾಯಿಗಳು ದಾಖಲಾಗಿವೆ. ಆದರೆ ಇನ್ನು ಮುಂದೆ ಈ ಒಂದು ಸ್ಥಳದಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು.
ತೆರಿಗೆ ಮುಕ್ತ: ಭೂತಾನ್ ರಾಷ್ಟ್ರದಲ್ಲಿ ಫುಯೆನ್ ಶೋಲಿಂಗ್ ಹಾಗೂ ಥಿಂಪು ಸ್ಥಳಗಳಿಗೆ ಭೇಟಿ ನೀಡಿದರೆ ಇಲ್ಲಿ ಭಾರತೀಯರು ಚಿನ್ನವನ್ನು ತೆರಿಗೆ ನೀಡದೆ ಖರೀದಿಸಬಹುದು. ಹೌದು, ಭೂತಾನ್ ಪ್ರವಾಸಿಗರಿಗೆ 20 ಗ್ರಾಂ ಡ್ಯೂಟಿ ಫ್ರೀ ಚಿನ್ನವನ್ನು ಖರೀದಿಸಲು ಅನುಮತಿ ನೀಡುತ್ತಿದೆ. ಡ್ಯೂಟಿ ಫ್ರೀ (BDF) ಅಂದರೆ ಸುಂಕ ಮುಕ್ತ ಚಿನ್ನವನ್ನು ಭೂತಾನ್ ಪ್ರವಾಸೋದ್ಯಮ ಇಲಾಖೆ ಅಧಿಕೃತವಾಗಿ ಪ್ರವಾಸಿಗರಿಗೆ ನೀಡಲು ಮುಂದಾಗಿದೆ.
ಹೀಗಾಗಿ ಅಗ್ಗದ ದರದಲ್ಲಿ ಚಿನ್ನ: ದುಬೈನಲ್ಲಿ ಚಿನ್ನದ ಮೇಲಿನ ತೆರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿ ಅನೇಕ ಭಾರತೀಯರು ದುಬೈಗೆ ಹೋಗಿ ಬಂಗಾರ (Gold) ಖರೀದಿ ಮಾಡುವುದು ನಿಮಗೆಲ್ಲ ಗೊತ್ತಿರಬಹುದು. ಭಾರತಕ್ಕೆ ಹೋಲಿಸಿದರೆ ಇಲ್ಲಿ ಚಿನ್ನದ ಬೆಲೆ ಕಡಿಮೆ ಇರುತ್ತದೆ. ಅದೇ ರೀತಿ ಭಾರತೀಯ ಪ್ರವಾಸಿಗರಿಗೆ ಕಡಿಮೆ ಬೆಲೆಗೆ ಚಿನ್ನವನ್ನು ಭೂತಾನ್ ಕೂಡ ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ.
ಈ ಕಾರಣಕ್ಕಾಗಿ ಭೂತಾನ್ಗೆ ಹೋಗುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುವುದು. ಪ್ರವಾಸೋದ್ಯಮದ ಆದಾಯ ಹೆಚ್ಚಿಸುವುದರ ಜತೆಗೆ ವಿದೇಶಿ ವಿನಿಮಯ ಕೂಡ ಹೆಚ್ಚಿಸಬೇಕು ಎನ್ನುವುದು ಭೂತಾನ್ ಸರ್ಕಾರದ ಉದ್ದೇಶ. ಇದರಿಂದ ಭಾರತೀಯ ಪ್ರವಾಸಿಗರು ಭೂತಾನ್ಗೆ ಪ್ರವಾಸಕ್ಕೆ ಹೋದರೆ 20 ಗ್ರಾಂ ಚಿನ್ನವನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.
ಶರತ್ತುಗಳು ಅನ್ವಯ: ಪ್ರವಾಸಿಗರು ಭೂತಾನ್ನಲ್ಲಿ ಸುಂಕ ರಹಿತ ಚಿನ್ನ ವನ್ನು ಖರೀದಿ ಮಾಡುವುದಾದರೆ ಕೆಲವು ಮೂಲಭೂತ ಶರತ್ತುಗಳನ್ನು ಒಪ್ಪಿಕೊಳ್ಳಬೇಕು. ಚಿನ್ನ ಖರೀದಿಸುವಾಗ ಪ್ರವಾಸಿಗರು ಎಸ್ಡಿಎಫ್ ಪಾವತಿಸಬೇಕು. ಭೂತಾನ್ ಪ್ರಮಾಣಿಕೃತ ಹೋಟೆಲ್ನಲ್ಲಿ ಒಂದು ದಿನ ಕನಿಷ್ಠ ಉಳಿದುಕೊಂಡಿರುವುದಕ್ಕೆ ಸಾಕ್ಷಿ ರಸೀದಿಯನ್ನು ನೀಡಬೇಕಾಗುತ್ತದೆ.
ಹಣವನ್ನು ಯುಎಸ್ ಡಾಲರ್ ಮೂಲಕ ಪಾವತಿ ಮಾಡಬೇಕು. ಈ ಶರತ್ತುಗಳಿಗೆ ಬದ್ಧರಾಗಿದ್ದರೆ ಭಾರತದಿಂದ ಹೋಗಿರುವ ಪ್ರವಾಸಿಗರು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಕೇವಲ 27 ಸಾವಿರಗಳಿಂದ ಮೂವತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಬಹುದು. ಆದರೆ ಅಲ್ಲಿಂದ ಚಿನ್ನ ತರುವುದಿದ್ದರೆ ಕೇವಲ 20 ಗ್ರಾಂ ವರೆಗೆ ಸುಂಕ ಮುಕ್ತ ಚಿನ್ನ ಖರೀದಿ ಮಾಡಬಹುದು ಅಷ್ಟೇ. ಹಾಗಾಗಿ ಇನ್ನು ಮುಂದೆ ಭೂತಾನ್ಗೆ ಪ್ರವಾಸ ಬೆಳೆಸುವ ಭಾರತೀಯರ ಸಂಖ್ಯೆ ಜಾಸ್ತಿಯಾದರೆ ಆಶ್ಚರ್ಯವೇನು ಇಲ್ಲ.