ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ(45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತರು.
ಮೃತ ಕುಟುಂಬ ಶ್ರಾವಣ ಮಾಸದ ನಿಮಿತ್ತ ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿತ್ತು. ಹೀಗಾಗಿ ಕಲ್ಲಾಪೂರ ಕಡೆಗೆ ಹೊರಟ್ಟಿದ್ದ ಕಾರು ಹಾಗೂ ಇಳಕಲ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ NWKRTC ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ಬಸ್‌ನ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನರಗುಂದ ಪೊಲೀಸರು ಪರಿಶೀಲನೆ ನಡೆಸಿ ಬಸ್‌ನಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.