ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನೀಲವ್ವ ಹರದೊಳ್ಳಿ ( 40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಮೃತಪಟ್ಟಿದ್ದು, ಇನ್ನೋರ್ವ ಮೃತನ ವಯಸ್ಸು ಅಂದಾಜು 45 ಆಗಿದ್ದು, ಇವರು ಸಹ ಬಾಗಲಕೋಟೆ ಮೂಲದವರು ಎನ್ನಲಾಗಿದೆ. ಆದ್ರೆ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ.
ಇನ್ನು ಗಾಯಗೊಂಡ ಏಳು ಜನರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (KIMS) ದಾಖಲಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ ಆಸ್ಪತ್ರೆ ಶವಾಗರಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ಮೃತರು ಕೆಲಸ ಅರಸಿ ಬಾಗಲಕೋಟೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡಿರುವ ಏಳು ಪ್ರಯಾಣಿಕರು ಕೂಡ ಬಾಗಲಕೋಟೆ ಜಿಲ್ಲೆಯವರು.
ಸಾರಿಗೆ (KA-19-F-3470) ಬಸ್ ಬಾಗಲಕೋಟೆಯಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ರಸ್ತೆಬದಿ ಪಾರ್ಕ್ ಮಾಡಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಅಪಘಾತದಲ್ಲಿ 7 ಹಾಗೂ 12 ವರ್ಷದ ಚಿಕ್ಕ ಚಿಕ್ಕ ಮಕ್ಕಳೂ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಸ್ತೆಯಂಚಿನಲ್ಲಿ ನಿಲ್ಲಿಸಿದ್ದ ಲಾರಿ ಇಂಡಿಕೇಟರ್ ಹಾಕಿರಲಿಲ್ಲ. ಬಸ್ ಓವರಟೇಕ್ ಮಾಡುವ ಸಂದರ್ಭದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಬಸ್ ಚಾಲಕ ಹಾಗೂ ನಿರ್ವಾಹಕ ದುರ್ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸ್ಥಳ ಯಲ್ಲಾಪುರ- ಅಂಕೋಲಾ ರಸ್ತೆ ದಟ್ಟ ಕಾಡು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ್ದು, ದುರ್ಗಮ ರಸ್ತೆಯಾಗಿದೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಪಿಐ ರಮೇಶ್ ಹಾನಾಪುರ ನೇತೃತ್ವದಲ್ಲಿಯೇ ಗಾಯಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. PSI ಯಲ್ಲಾಲಿಂಗ್ ಕುನ್ನೂರ, ಮೃತ ದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಿಸಿದದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related
