ಬೆಂಗಳೂರು: ನಾನು ಯಾವತ್ತು ಕೂಡ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಜತೆಗೆ ಈಗ ಖಾತೆ ಬದಲಾಯಿಸುವಂತೆಯೂ ಕೇಳಿಲ್ಲ. ಸುಳ್ಳುಸುದ್ದಿ ಗಣನೆಗೆ ತೆಗೆದುಕೊಳ್ಳುವುದು ಬೇಡ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಇಂದು ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಕುರಿತಂತೆ ನಿಮಗೆ ಯಾರು ಹೇಳಿದರು. ಒಂದು ವೇಳೆ ನಿಮ್ಮ ಕಿವಿಗೆ ಬಿತ್ತು ಅಥವಾ ಯಾರೋ ಹೇಳಿದರು ಎಂಬ ಮಾತು ಬಂದಾಗ ನನ್ನನ್ನು ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದಲ್ಲವೆ. ಸುದ್ದಿ ಮಾಡುವ ಮೊದಲು ನನ್ನನ್ನು ನೇರವಾಗಿ ಕೇಳಬಹುದಲ್ಲವೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಇನ್ನು ನಾನು 30 ವರ್ಷದಿಂದ ನಿಮ್ಮೊಂದಿಗೆ ಸಂಯಮದಿಂದ ನಡೆದುಕೊಂಡಿದ್ದೇನೆ. ನೀವು ಅಷ್ಟೇ ಗೌರವಿಸಿದ್ದೀರಿ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವುದು ಒಳ್ಳೆಯದಾಗಿ ಕಾಣಿಸುವುದಿಲ್ಲ, ಶೋಭೆ ತರುವುದಿಲ್ಲ ಎಂದರು.
ನಾನು ನನ್ನ ಶ್ರೀಮತಿಯವರು ಸೇರಿದಂತೆ ಯಾರ ಬಳಿಯೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸುವಂತೆ ಆಪ್ತರ ಬಳಿ ಹೇಳಿದರು, ಮುಖ್ಯಮಂತ್ರಿಯವರ ಬಳಿ ಕೇಳಿದರು. ಅವರು ಸುಮ್ಮನೆ ಇರಿ ಎಂದು ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದನ್ನು ಯಾರು ಹೇಳಿದರು. ಸುದ್ದಿ ಮಾಡುವ ಮೊದಲೇ ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು ಎಂದು ಹೇಳಿದರು.
ನಮ್ಮನ್ನು ಅಭಿಮಾನಿಗಳು, ಜನ ಅನುಕರಿಸುವವರು ಇದ್ದಾರೆ. ಕ್ಷೇತ್ರದ ಮತದಾರರು ಏನೆಂದುಕೊಳ್ಳುತ್ತಾರೆ. ಮುಂದೆ ಈ ರೀತಿ ಊಹಾಪೋಹಾ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ ನನ್ನನ್ನು ಕೇಳಿ ಸ್ಪಷ್ಟಪಡಿಸಿಕೊಳ್ಳಿ. ನಾನು ಯಾವತ್ತು ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ ಎಂದು ಹೇಳಿದರು.
ಇನ್ನು ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಈ ಘಟನೆಯಿಂದ ನಾವು ನೋವನ್ನು ಅನುಭವಿಸುತ್ತಿದ್ದೇವೆ. ಈಗ ಕಾಲ್ತುಳಿತ ಘಟನೆಯ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಾದೀಶರಾದ ಮೈಕೆಲ್ ಡಿ.ಕುನ್ಹಾ ಅವರ ಏಕವ್ಯಕ್ತಿ ಆಯೋಗಕ್ಕೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡುತ್ತಾರೆ. ನಾವು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ. ತನಿಖೆ ವೇಳೆ ನಮ್ಮನ್ನು ಕೇಳಿದರೆ ಹೇಳುತ್ತೇವೆ. ಈಗ ಹೇಳಿಕೆ ನೀಡಿದರೆ ತನಿಖೆಯ ದಿಕ್ಕು ಬೇರೆ ಕಡೆ ಹೋಗುತ್ತದೆ ಎಂದರು.

ದೆಹಲಿಗೆ ಕರೆದಿಲ್ಲ:
ಪಕ್ಷದ ವರಿಷ್ಟರು ನನ್ನನ್ನು ದೆಹಲಿಗೆ ಕರೆದಿಲ್ಲ. ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಘಟನೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಸಿಎಂ, ಡಿಸಿಎಂ ಅವರನ್ನು ಕೇಳಿ ಮಾಹಿತಿ ಪಡೆಯುತ್ತಾರೆ ಎಂದು ತಿಳಿಸಿದರು.
Related
