ಅಹಿಂದ ವರ್ಗಕ್ಕೆ ನಾನು ಅನೇಕ ಭಾಗ್ಯ ಯೋಜನೆಗಳ ನೀಡಿದ್ದೇನೆ: ಮಾಜಿ ಸಿಎಂ ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಹಾಸನ: ಅಹಿಂದ ವರ್ಗಕ್ಕೆ ನನ್ನ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಳಿದ್ದಾರೆ. ಅಹಿಂದ ವರ್ಗಗಳ ಸಂಘಟನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ, ಅವರಿಗೆ ಗ್ಯಾರಂಟಿ ಹಾಗೂ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಹಾಸನದಲ್ಲಿ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ. ಕುಮಾರಸ್ವಾಮಿಯವರು ತಾವು ರೈತರ ಕುಟುಂಬದವರು ಎಂದು ಹೇಳಿಕೊಳ್ಳುತ್ತಾರೆ, ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ ಎಂದು ಪ್ರಶ್ನೆ ಮಾಡಿದರು.
ಸೆಪ್ಟೆಂಬರ್ ನಿಂದ ನವೆಂಬರ್ 2025ರವೆಗೆ ಕರ್ನಾಟಕಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ನಷ್ಟವಾಗಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಜಾರಿಗೆ ತಂದು, ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದ ಪರಿಣಾಮ, ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ದೇಶದ ಎಲ್ಲ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದರು.
ಜಿಎಸ್‌ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯರು ಇದುವರೆಗೂ ಧ್ವನಿ ಎತ್ತಿರುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತ ಸಚಿವರು ₹5,300 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಘೋಷಣೆಯಲ್ಲಿ ಹಿಂದಿನ ಸರ್ಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಟೀಕೆಗಳು ಸತ್ತುಹೋಗುತ್ತವೆ ಸಾಧನೆಗಳು ಉಳಿಯುತ್ತವೆ ಎಂದು ಹೇಳಬೇಕಾಗುತ್ತದೆ. ಜಿಎಸ್‌ಟಿ ಯಲ್ಲಿ ನಮಗೆ ಈ ವರ್ಷ ಸುಮಾರು 12 ಸಾವಿರ ಕೋಟಿ ನಷ್ಟವಾಗಬಹುದೆಂಬ ಅಂದಾಜಿದೆ. 1 ಲಕ್ಷದ 26 ಸಾವಿರ ಕೋಟಿ ತೆರಿಗೆ ಬರಲಿದೆ ಎಂದು ಅಂದಾಜು ಮಾಡಿದ್ದೆವು. ಈಗ 12 ಸಾವಿರ ಕೋಟಿ ಅದರಲ್ಲಿ ಕಡಿಮೆಯಾಗಲಿದೆ. 88 ಸಾವಿರ ಕೋಟಿ ತಲುಪಲು ಕಷ್ಟವಾಗಲಿದೆ. ಇದನ್ನು ಏಕೆ ಪ್ರಶ್ನಿಸುವುದಿಲ್ಲ? ಕರ್ನಾಟಕದ ಮಂಡ್ಯದಿಂದ ಸಂಸದರಾಗಿದ್ದಾರಲ್ಲ. ಸಿದ್ದರಾಮಯ್ಯ ಅವರು ಅಹಿಂದಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಸಂಸತ್ತಿನಲ್ಲಿ ಎಂದಾದರೂ ಈ ಬಗ್ಗೆ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಟೀಕೆ ಮಾಡಲೆಂದೇ ಮಾತನಾಡುವುದಲ್ಲ. ನಾವು ಏನು ಮಾಡಿದ್ದೇವೆ ಎಂದು ಹೇಳುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 1ಲಕ್ಷದ 8,135 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಇದನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಮನೆಗೆ ತಲುಪಿಸಿದ್ದೇವೆ. ಕೊಟ್ಟಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ವಿಪಕ್ಷಗಳನ್ನು ಅವಿಶ್ವಾಸ ನಿರ್ಣಯ ತರಲಿ, ನಾವು ಎದುರಿಸಲು ತಯಾರಿದ್ದೇವೆ. ನಾವು ತೆರೆದ ಪುಸ್ತಕ ಇದ್ದಂತೆ. ನಮ್ಮದು ಪಾರದರ್ಶಕ ಸರ್ಕಾರ. ಎಲ್ಲವನ್ನು ಎದುರಿಸಲು ತಯಾರಿದ್ದೇವೆ ಎಂದು ಹೇಳಿದರು.
ಇನ್ನು ಮಹಿಳಾ ಮೀಸಲಾತಿ ಜಾರಿಯಾಗಿಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮೊದಲಿನಿಂದಲೂ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ. ಮೀಸಲಾತಿ ಕೊಡಬೇಕು ಎಂದರೆ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಏಕೆ ಮುಂದೂಡಬೇಕು ಎಂದು ಕೇಳಿದರು.
Related









