ಬೆಂಗಳೂರು: ನಿಮ್ಮ ಇಲಾಖೆಯ ಆದೇಶ ನೋಡಿಯೇ ರಾಜ್ಯದ ಜನತೆಗೆ ಸತ್ಯ ಹೇಳುವ ಕೆಲಸ ಮಾಡಿದ್ದೇನೆ. ಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರೇ ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ನಿಗಮದ ಬಸ್‌ಗಳಲ್ಲಿ ಜೂನ್ ತಿಂಗಳಲ್ಲಿ 20 ದಿನ ಉಚಿತ ಪ್ರಯಾಣ ಮಾಡಿರುವುದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ 250 ಕೋಟಿ ರೂ. ವೆಚ್ಚವಾಗಿದ್ದು, ಪ್ರಯಾಣ ವೆಚ್ಚದ ಮರು ಪಾವತಿ ಮಾಡಲು ನಾಲ್ಕೂ ನಿಗಮಗಳಿಗೆ ಆಗಸ್ಟ್ 1 ರಂದು 125 ಕೋಟಿ ರೂ. ಬಿಡುಗಡೆ ಮಾಡಿ ನಿಮ್ಮದೇ ಇಲಾಖೆ ಆದೇಶ ಮಾಡಿದೆ ಎಂದು ಟ್ವೀಟ್ ಮೂಲಕ ಗುದ್ದು ಕೊಟ್ಟಿದ್ದಾರೆ.
ಇದಿಷ್ಟೇ ಅಲ್ಲದೆ, ಸಾರಿಗೆ ನಿಗಮಗಳ ಬೇಡಿಕೆಗೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಕ್ಕೂ ಅರ್ಧದಷ್ಟು ಕಡಿಮೆ ಇದ್ದು, ಹೀಗಿರುವಾಗ ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳಿಗೆ ಸಿಬ್ಬಂದಿ ಸಂಬಳ, ಬಸ್‌ಗಳ ನಿರ್ವಹಣೆ, ಡೀಸೆಲ್‌ಗೆ ಹಣದ ಕೊರತೆಯಾಗುವುದು ವಾಸ್ತವಿಕ ಸತ್ಯ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ನೀವು ಹೇಳಿದಂತೆ ನಡೆದುಕೊಳ್ಳುತ್ತಿದ್ದೀರಾ ಎಂದಿರುವ ಅವರು, ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳೇ ಹುಸಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನು ಗಮನಿಸಿದರೆ ಬರುವಂತ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್‌ಗಳನ್ನು ಡೀಸೆಲ್ ಇಲ್ಲದೆ ನಿಲ್ಲಿಸುವಂತದ್ದು, ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತದ್ದು, ಕೆಟ್ಟ ಬಸ್‌ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದು ವ್ಯಂಗ್ಯವಾಡಿದ್ದು, ಇನ್ನಾದರೂ ಸಾರಿಗೆ ನಿಗಮಗಳಿಗೆ ಅವು ವೆಚ್ಚ ಮಾಡುತ್ತಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.