ಬೆಂಗಳೂರು: ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯಾಗಿದ್ದ ನಟ ಕೆ. ಶಿವರಾಮ್ ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ ಬುಧವಾರ ಹೃದಯಾಘಾತವಾಗಿತ್ತು. ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಲ್ಲದೆ ಕೆ.ಶಿವರಾಮ್ ಅವರ ದೀರ್ಘಕಾಲದ ಸ್ನೇಹಿತ ನಾಗೇಶ್ ಕಾಳೇನಹಳ್ಳಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ನಿಧನ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡದಲ್ಲೇ ಐಎಎಸ್ ಪರೀಕ್ಷೆ : ಕೆ ಶಿವರಾಮ್ ಅವರು ಏಪ್ರಿಲ್ 6, 1953 ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಹಳ್ಳಿಯಲ್ಲಿ ಜನಿಸಿದರು. 1985ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವರಾಂ, ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಎಎಸ್ ಅಧಿಕಾರಿಯಾಗಿ ಹಲವು ಜಿಲ್ಲೆಗಳಲ್ಲಿ ಡಿಸಿಯಾಗಿ ಸೇವೆ ಸಲ್ಲಿಸಿದ್ದರು.
1993ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕ್ಕೆ’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಶಿವರಾಮ್, ‘ವಸಂತ ಕಾವ್ಯ’, ‘ಸಾಂಗ್ಲಿಯಾನ ಭಾಗ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ’ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆ : 2013 ರಲ್ಲಿ, ಕೆ. ಶಿವರಾಮ್ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿದ್ದಾಗಲೇ ಸ್ವಯಂ ನಿವೃತ್ತರಾದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. 2014 ರಲ್ಲಿ, ಅವರು ಜನತಾ ದಳ (ಜಾತ್ಯತೀತ) ಸದಸ್ಯರಾಗಿ, ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಮೇಶ್ ಜಿಗಜಿಣಗಿ ವಿರುದ್ಧ ಸೋತಿದ್ದರು.
2014 ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಸೇರಿಕೊಂಡರು. ಆ ನಂತರ ಅವರು ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ, ಛಲವಾದಿ ಮಹಸಭಾ ಅಧ್ಯಕ್ಷರೂ ಆಗಿದ್ದರು.