ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಸೇರಿದಂತೆ ತಾಲೂಕಿನೆಲ್ಲೆಡೆ ಗೊಬ್ಬರ ಹಾಗೂ ಬೀಜ ವಿತರಣೆಯಲ್ಲಿ ಅನ್ಯಾಯವಾದರೆ ಇಲಾಖಾಧಿಕಾರಿಯೇ ನೇರ ಹೊಣೆ. ನಿರ್ಲಕ್ಷ್ಯ ತೋರಿದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದೆಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜರುಗಿದ, ತಾಲೂಕಿನ ರೈತ ಮುಖಂಡರು ಹಾಗೂ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ, ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳ ಅಂಗಡಿಗಳಲ್ಲಿ ರಸ ಗೊಬ್ಬರ ಬೀಜಗಳನ್ನು ಅತ್ಯಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರೈತರು ಖರೀದಿ ಮಾಡಿದ ಬೀಜ ಹಾಗೂ ರಸ ಗೊಬ್ಬರಕ್ಕೆ ಅನೇಕ ಅಂಗಡಿಗಳಲ್ಲಿ ರಶೀದಿ ನೀಡುತ್ತಿಲ್ಲ. ಈ ಬಗ್ಗೆ ಪ್ರತಿ ಸಭೆಗಳಲ್ಲಿ ಚರ್ಚಿಸುತ್ತಿದೆಯಾದರೂ, ಯಾವುದೇ ಕ್ರಮ ಜರುಗಿಸುವ ಧೈರ್ಯವನ್ನು ಅಧಿಕಾರಿಗಳು ತೋರಿಲ್ಲ ಎಂದು ಆರೋಪಿಸಿದರು.
ಸರ್ಕಾರದ ನಿಯಮಗಳನ್ನು ಯಾವ ಅಂಗಡಿವರು ಪಾಲನೆ ಮಾಡುತ್ತಿಲ್ಲ, ಪಟ್ಟಣದ ಅಂಗಡಿಗಳಲ್ಲಿ ರಸ ಗೊಬ್ಬರ ಇಲ್ಲ ಎಂದು ಹೇಳುತ್ತಾರೆ. ಆದರೆ, ಗ್ರಾಮಗಳಲ್ಲಿ ಹೆಚ್ಚಿನ ಬೆಲೆಗೆ ಬೀಜ ಗೊಬ್ಬರ ಮಾರಾಟ ಮಾಡಲಾಗುತ್ತಿದೆ, ಅವರಿಗೆ ಅದು ಎಲ್ಲಿಂದ ಬರುತ್ತದೆ ಈ ಬಗ್ಗೆ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೀರಣ್ಣ ಪ್ರಶ್ನಿಸಿದರು.
ರೈತ ಮುಖಂಡರಾದ ಕೆ.ಕೆ.ಹಟ್ಟಿ ಮಹೇಶ ಹಾಗೂ ಕಕುಪ್ಪಿ ಬದವರಾಜ ಮತ್ತು ಭಾಷಾ ಸಾಬ್ ಮಾತನಾಡಿ, ಮುಂಗಾರು ಪೂರ್ವದಲ್ಲಿಯೇ ಸಭೆ ನಡೆಸಬೇಕಿದೆ. ಈ ಹಿಂದೆ ಅನೇಕ ಬಾರಿ ಇದರ ಬಗ್ಗೆ, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದರೂ ಮತ್ತೆ ಅದೇ ಲೋಪ ಎಸಗಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿ ಎಂ.ಟಿ.ಸುನೀಲ್ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ ಬೀಜ, ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಅಂಗಡಿಯವರು ರೈತರಿಗೆ ತಾವು ಮಾರಾಟ ಮಾಡಿದ ಬೀಜ ಗೊಬ್ಬರಗಳಿಗೆ, ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು. ಅಂಗಡಿಗಳಲ್ಲಿ ನಿಗದಿತ ದರಕ್ಕೆ ಮಾತ್ರ ಮಾರಾಟ ಮಾಡಬೇಕು. ನಿಯಮ ಮೀರಿ ಮಾರಾಟ ಮಾಡಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ರಸ ಗೊಬ್ಬರ ಹಾಗೂ ಬೀಜ ಮಾರಾಟ ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಉಲ್ಲಂಘಿಸಿರುವ ಬಗ್ಗೆ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಾಧಾರಗಳ ಸಮೇತ ದೂರು ಬಂದಲ್ಲಿ. ಅಂತಹ ಮಾಾರಟಗಾರರ ವಿರುದ್ಧ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಜಾರಿ ದಳ ಸಹಾಯಕ ನಿರ್ದೇಶಕ ಕುಮಾರ ಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ, ತಾಂತ್ರಿಕ ವ್ಯವಸ್ಥಾಪ ಶ್ರವಣ್ ಕುಮಾರ್, ಕೃಷಿಕ ಸಮಾಜ ಅಧ್ಯಕ್ಷ ಎಂ.ಜಿ. ಸಿದ್ದನಗೌಡ, ಉಪಾಧ್ಯಕ್ಷ ನಂದಿ ಜಂಬಣ್ಣ, ರೈತ ಸಂಘದ ಮುಖಂಡರಾದ ಹಾಲಸ್ವಾಮಿ, ಪರುಶುರಾಮ್ ನಾಯ್ಕ್, ದುರುಗಪ್ಪ, ಶೇಷಪ್ಪ ಕಾಟೇರ್, ನಾಗರಾಜ, ನಾರಾಯಣ ನಾಯ್ಕ್, ಪಾಂಡುರಂಗ ನಾಯ್ಕ್ ಹಾಗೂ ಕೃಷಿ ಪರಿಕರ ಮಾರಾಟಗಾರರು ಸಭೆಯಲ್ಲಿ ಇದ್ದರು.