NEWSನಮ್ಮಜಿಲ್ಲೆಶಿಕ್ಷಣ

ಮಂಡ್ಯ: ಶಾಲೆಯಲ್ಲಿ ಮೊಟ್ಟೆ ಕೊಟ್ಟರೆ ನಮ್ಮ ಮಕ್ಕಳ ಟಿಸಿಕೊಡಿ: ಹಠ ಹಿಡಿದ ಪೋಷಕರು

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಸರ್ಕಾರಿ ಶಾಲೆ ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮೊಟ್ಟೆ ಕೊಡುತ್ತಿದೆ. ಅದಕ್ಕೆ ಪಾಲಕರ ಬೆಂಬಲವೂ ಇದೆ. ಇಲ್ಲಿ ಕೆಲ ಪೋಷಕರು ನೀವು ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿದರೆ ಟಿಸಿ ಕೊಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಹೌದು! ಮಂಡ್ಯದ ಗ್ರಾಮವೊಂದರಲ್ಲಿ ಈಗ ಮೊಟ್ಟೆ ವಿವಾದ ಉದ್ಬವವಾಗಿದೆ. ಮೊಟ್ಟೆ ಕೊಡುವುದೇ ಆದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳ್ಸಲ್ಲ ಎಂದು ಪೋಷಕರು ಹಠಹಿಡಿದು ಕುಳಿತಿದ್ದಾರೆ.

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಈ ಶಾಲೆಯಲ್ಲಿರುವ 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಮೊಟ್ಟೆ ಬೇಡ ಎಂದು ಹೇಳುತ್ತಿದ್ದಾರೆ. ಪೋಷಕರು ಕೂಡ ಮೊಟ್ಟೆ ಕೊಡುವುದನ್ನು ವಿರೋಧಿಸಿದ್ದು, ಮೊಟ್ಟೆ ಕೊಟ್ರೆ ನಮ್ಮ ಮಕ್ಕಳಿಗೆ ಟಿಸಿ ಕೊಡಿ ಬೇರೆ ಶಾಲೆಗೆ ಸೇರಿಸುತ್ತೀವಿ ಎಂದು ಹೇಳುತ್ತಿದ್ದಾರೆ.

ಏಕೆ ಇವರು ಹೀಗೆ ಹೇಳುತ್ತಿದ್ದಾರೆ ಎಂದರೆ ಅದಕ್ಕೆ ಒಂದು ಕಾರಣ ಕೂಡ ಇದೆ. ಶಾಲೆ ಸಮೀಪದಲ್ಲೇ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವಿದೆ. ಈ ಹಿಂದಿನಿಂದಲೂ ಈ ದೇವಾಲಯ ಸುತ್ತಮುತ್ತ ಮಾಂಸಾಹಾರ ನಿಷೇಧವಿದೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಇನ್ನು ಶಾಲೆ ಕೂಡ ದೇವಾಲಯದ ಸಮೀಪದಲ್ಲೇ ಇರುವುದರಿಂದ ನೀವು ಮೊಟ್ಟೆ ನೀಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆ.

ಇದೇ ಕಾರಣದಿಂದ ಕಳೆದ 3 ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ವಿತರಿಸಲು ನಿರ್ಧರಿಸಿದಾಗಲೂ ಈ ಶಾಲೆಯಲ್ಲಿ ಮೊಟ್ಟೆ ಬದಲಿಗೆ ಬಾಳೆಹಣ್ಣು, ಚಿಕ್ಕಿ ನೀಡಲು ಶಾಲೆಯ ಎಸ್‌ಡಿಎಂಸಿ ನಿರ್ಧರಿಸಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ನಿಯಮವನ್ನೇ ಪಾಲಿಸಿಕೊಂಡು ಬರಲಾಗುತ್ತಿದೆ.

ಆದರೆ ಈಗ ಗ್ರಾಮದ ಕೆಲವರು ಮಕ್ಕಳಿಗೆ ಪೌಷ್ಟಿಕಾಹಾರ ಪೂರೈಕೆ ದೃಷ್ಟಿಯಿಂದ ಮೊಟ್ಟೆ ವಿತರಿಸಿ ಎಂದು ಮನವಿ ಮಾಡಿದ್ದಾರೆ. ಅವರ ಮನವಿ ಮನ್ನಣೆ ನೀಡಿ ಶಿಕ್ಷಣ ಇಲಾಖೆ ಕೂಡ ಸರ್ಕಾರದ ನಿಯಮದಂತೆ ಮೊಟ್ಟೆ ಕೊಡಲು ಮುಂದಾಗಿದೆ. ಆದರೆ, ಅಧಿಕಾರಿಗಳ ಈ ನಿರ್ಧಾರ ಗ್ರಾಮಸ್ಥರನ್ನು ಕೆರಳಿಸಿದೆ. ಮೊಟ್ಟೆ ತಿನ್ನುವ ಮಕ್ಕಳಿಗೆ ಅವರ ಮನೆಗೆ ಮೊಟ್ಟೆ ತಲುಪಿಸಿ. ನೀವು ಶಾಲೆಯಲ್ಲಿ ಮೊಟ್ಟೆ ಕೊಟ್ಟು ಜನರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಒತ್ತಾಯಿಸುತ್ತಿದ್ದಾರೆ.

ಒಟ್ಟಾರೆ ಆಲಕೆರೆ ಗ್ರಾಮದ ಮೊಟ್ಟೆ ವಿವಾದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಮೊಟ್ಟೆ ಕೊಟ್ಟರೇ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ, ಮೊಟ್ಟೆ ಕೊಡದಿದ್ರೆ ಸರ್ಕಾರದ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆಯಾಗುವ ಭಯ ಕಾಡುತ್ತಿದೆ. ಹೀಗಾಗಿ ಇಲ್ಲಿ ಪೋಷಕರು ಹೇಳುತ್ತಿರುವಂತೆ ಮಕ್ಕಳಿಗೆ ಶಾಲೆಯಲ್ಲಿ ಪೊಟ್ಟೆ ಕೊಡುವ ಬದಲು ಆ ಮೊಟ್ಟೆಗಳನ್ನೇ ಅವರ ಮನೆಗೆ ಕೊಟ್ಟು ಅಲ್ಲೇ ತಿನ್ನುವಂತ ಕ್ರಮ ತೆಗೆದುಕೊಂಡರೆ ಯಾವುದೇ ಗೊಂದಲವಿಲ್ಲ.

ಆದರೆ, ಮಕ್ಕಳ ಮನೆಗಳಿಗೆ ಶಾಲೆಯಿಂದ ಮೊಟ್ಟೆ ಕೊಡುವುದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಒಪ್ಪಿಗೆ ನೀಡಿ ಮನೆಗೆ ಮೊಟ್ಟೆ ಕೊಡುತ್ತಿರುವುದಕ್ಕೆ ಕಾರಣವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಆ ಬಳಿಕ ಮೊಟ್ಟೆ ವಿತರಣೆ ಮಾಡಬಹುದಾಗಿದೆ.ಈ ಕೆಲಸವನ್ನು ಸಂಬಂಧಪಟಟ ಅಧಿಕಾರಿಗಳು ಮಾಡಬೇಕಿದೆ.

Megha
the authorMegha

Leave a Reply

error: Content is protected !!