ಅಕ್ರಮ ಆಸ್ತಿ ಗಳಿಕೆ ಸಾಬೀತ್: BMTC ಅಧಿಕಾರಿ ರಾಮಕೃಷ್ಣ ರೆಡ್ಡಿಗೆ 3ವರ್ಷ ಕಠಿಣ ಜೈಲು ಶಿಕ್ಷೆ, 70 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು

ಬೆಂಗಳೂರು: ಆದಾಯಕ್ಕೂ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಅಧಿಕಾರಿಯೊಬ್ಬರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 70 ಲಕ್ಷ ರೂ. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಲೋಕಾಯುಕ್ತರು ದಾಖಲಿಸಿದ್ದ ಪ್ರಕರಣ: ಬಿಎಂಟಿಸಿ ವಿಭಾಗೀಯ ಸಂಚಾರ ನಿಯಂತ್ರಕ ಕೆ.ಬಿ.ರಾಮಕೃಷ್ಣ ರೆಡ್ಡಿ ಶಿಕ್ಷೆಗೆ ಶಿಕ್ಷೆಗೆ ಒಳಗಾಗಿರುವವರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದಡಿ 2014ರಲ್ಲಿ ಕೆ.ಬಿ.ರಾಮಕೃಷ್ಣ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಕೆ.ಬಿ.ರಾಮಕೃಷ್ಣ ರೆಡ್ಡಿ ಅವರು ಆದಾಯಕ್ಕಿಂತ 61.45 ಲಕ್ಷ ರೂ. ಮೌಲ್ಯದ ಅಧಿಕ ಆಸ್ತಿ ಹೊಂದಿರುವುದನ್ನು ಬಯಲಿಗೆಳೆದಿದ್ದರು. ಇನ್ನು ಈ ಸಂಬಂಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಅ.31ರಂದು ಆರೋಪಿ ಕೆ.ಬಿ.ರಾಮಕೃಷ್ಣ ರೆಡ್ಡಿಗೆ ಮೂರು ವರ್ಷ ಕಠಿಣ ಸಜೆ ಹಾಗೂ 70 ಲಕ್ಷ ರೂ. ದಂಡ ವಿಧಿಸಿ ಅಂತಿಮ ತೀರ್ಪು ನೀಡಿದೆ.
ಇನ್ನು ಈ ದಂಡದ ಹಣ ಪಾವತಿಸಲು ವಿಫಲರಾದರೆ ಆರು ತಿಂಗಳುಗಳ ಕಾಲ ಸಾದ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸರ ಪರ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯಕ್ ಅವರು ಸಮರ್ಪಕ ವಾದ ಮಂಡಿಸಿದ್ದರು.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಇಂಥ ಭ್ರಷ್ಟರು ಬಹುತೇಕ ಮಂದಿ ಇದ್ದಾರೆ. ಈಗಲೂ ಡಿಪೋಗಳು, ವಿಭಾಗೀಯ ಹಾಗೂ ಕೇಂದ್ರ ಕಚೇರಿಯಲ್ಲಿ ಲಂಚ ಪಡೆಯುವುದಕ್ಕೆ ತಮಗೆ ಆಪ್ತರೆನಿಸುವ ಚೇಳಗಳನ್ನು ಬಿಟ್ಟಿದ್ದಾರೆ. ಈ ಚೇಳಗಳು ನೌಕರರ ಹೆದರಿಸಿ ಲಂಚ ಪಡೆಯುವ ಡ್ಯೂಟಿಯಲ್ಲಿ ನಿರತರಾಗಿದ್ದುಕೊಂಡೇ ಸಂಸ್ಥೆಯಿಂದ ತಿಂಗಳು ತಿಂಗಳು ಸಂಬಳ ಪಡೆಯುತ್ತಿದ್ದಾರೆ.
Related








