ಹಾಸನ: ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳೆಂದರೆ ಅಲ್ಲಿ ಬರೀ ಲಂಚಬಾಕರೇ ಇರುತ್ತಾರೆ ಎನ್ನುವುದು ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಇದಕ್ಕೆ ಕಾರಣ ಸಣ್ಣಸಣ್ಣ ಕೆಲಸಗಳಿಗೂ ಸರ್ಕಾರಿ ಕಚೇರಿಯ ಅಧಿಕಾರಿಗಳು ಜನರನ್ನು ಅಲೆದಾಡಿಸುವುದಲ್ಲದೆ, ಅವರ ಬಳಿ ಹಣವನ್ನು ಪೀಕುತ್ತಿರುವುದು.
ಎಲ್ಲೆಡೆ ಈ ಲಂಚ ತಾಂಡವವಾಡುತ್ತಿರುವುದರ ಮಧ್ಯೆ ಹಾಸನದ ಬಿಇಒ ಕಚೇರಿಯ ಅಧೀಕ್ಷಕ ಡಿ.ಎಸ್. ಲೋಕೇಶ್ ಅವರು ತಮ್ಮ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದು, ಈ ವಿಚಾರ ಸಾಮಾಜಿಕ ಜಲಾತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಹಿಂದೆ ಮಾಜಿ ಪ್ರಧಾನಿ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಲೋಕೇಶ್ ಅವರು ತಮ್ಮ ಜನಸ್ನೇಹಿ ಕೆಲಸದಿಂದ ಜನಮೆಚ್ಚುಗೆ ಗಳಿಸಿದ್ದರು. ಇದೀಗ ಪ್ರಮೋಷನ್ ಪಡೆದು ಬಿಇಒ ಕಚೇರಿಯ ಅಧೀಕ್ಷರಾಗಿದ್ದು, ಅವರು ಕರ್ತವ್ಯ ಆರಂಭಿಸಿದ ದಿನದಿಂದ ಹೀಗೊಂದು ಬೋರ್ಡ್ ಹಾಕಿ ಕೆಲಸ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಇನ್ನು ಇಂತಹ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ ಎಂದು ಜನರು ಮನದಾಳದಿಂದ ಹೇಳುತ್ತಿದ್ದು, ಇವರಂತೆಯೇ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಏಕೆ ಬೋರ್ಡ್ ಹಾಕಿಕೊಳ್ಳಬಾರದು ಅಧಿಕಾರಿಗಳೂ ಎಂದು ಕೂಡ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಈ ರೀತಿ ಬೋರ್ಡ್ ಹಾಕಿದರೆ ತಮ್ಮ ಬಳಿ ಬರುವವರಿಗೆ ಈ ಕೆಲಸಕ್ಕೆ ಎಷ್ಟು ಕೊಡಬೇಕೋ ಎಂಬ ಅಳುಕು ಇಲ್ಲದೆ ಕೆಲಸವನ್ನು ಮಾಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ ಅಲ್ಲವೆ. ಅದು ಅಲ್ಲದೆ ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹೇಬರು ಇಷ್ಟು ಲಂಚ ಕೇಳುತ್ತಿದ್ದಾರೆ ನಾನು ಮಾತನಾಡುತ್ತೇನೆ ನೀನು ಇಷ್ಟು ಕೊಡು ಎಂದು ಹೇಳಿ ನಿಮಗೆ ಗೊತ್ತಿಲ್ಲದೆ ಸಿಬ್ಬಂದಿಗಳು ಲಂಚ ಪಡೆಯುವುದಕ್ಕೂ ಬ್ರೇಕ್ ಬೀಳುತ್ತದೆ ಅಲ್ಲವೆ ಎಂದು ಪ್ರಾಮಾಣಿಕ ಅಧಿಕಾರಿಗಳು ಈ ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ.