ಬೆಂಗಳೂರು: ಕಳೆದ ಆರು ದಶಕಗಳಿಂದಲೂ (1948) ರಾಜ್ಯದ ಬಡುವರ ಸಾರಥಿಯಾಗಿ ಜನರಿಗೆ ರಾಜ್ಯದ ಉದ್ದಗಲಕ್ಕೂ ಸಾರಿಗೆ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 62ನೇ ಸಂಸ್ಥಾಪನಾ ದಿನಾಚರಣೆ ಬೆಂಗಳೂರಿನಲ್ಲಿ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಈ ವೇಳೆ ಅಧಿಕಾರಿಗಳ ಕಲ್ಯಾಣಕ್ಕೆ, ಸಾರ್ವಜನಿಕರ ಸೇವೆಗೆ ನಿಗಮ ಮಹತ್ವ ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ಸಮಾರಂಭಕ್ಕೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ದೇಶದ ಮುಂಚೂಣಿ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆ ನಮಗಿದೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ವೇಳೆ ನೂತನ ವಾಹನ ಖರೀದಿಸಲಾಗದೇ 8 ರಿಂದ 9 ಲಕ್ಷ ಕಿ.ಮಿ. ಕ್ರಮಿಸಿದ ಹಳೆಯ ಕವಚ ಬಸ್‌ಗಳನ್ನು ದುರಸ್ತಿ ಮಾಡಿ ಅವುಗಳನ್ನು ಮುಂದುವರಿಸುವ ಯೋಜನೆಯನ್ನು ನಮ್ಮ ಅಧಿಕಾರಿಗಳು ರೂಪಿಸಿದ್ದಾರೆ ಎಂದು ಅವರಿಗೆ ಅಭಿನಂದನೆ ತಿಳಿಸಿದರು.
ಇನ್ನು ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ನಿಗಮಗಳು ತನ್ನ ಎಲ್ಲ ಸಂಪ್ಮನೂಲಗಳನ್ನು ಕ್ರೂಢಿಕರಿಸಿಕೊಂಡು ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ. ಅಧಿಕಾರಿಗಳ ಈ ಕಾರ್ಯ ಪ್ರಶಂಸನೀಯ. ಇದರ ಜತೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿನ ಲಭ್ಯವಿರುವ ಅನುಕಂಪಕದ ಅವಲಂಬಿತ ಖಾಲಿ ಹುದ್ದೆಗಳನ್ನು ಯಾವುದೇ ವಿಳಂಬ ಮಾಡದೇ ಸೂಕ್ತ ರೀತಿಯಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಗಮವು 62ನೇ ಸಂಸ್ಥಾಪನಾ ದಿನಾರಣೆಯ ಅಂಗವಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳು ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಲ್ಯಾಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ. ಅಲ್ಲದೇ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
20 ನೂತನ ಬೊಲೆರೋ ವಾಹನ: ಅಪಘಾತ ಪರಿಹಾರ ನಿಧಿ ಅಡಿಯಲ್ಲಿ ಅಪಘಾತ ತಡೆಗಟ್ಟಲು ಹಾಗೂ ತ್ವರಿತಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಪ್ರಕ್ರಿಯೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅಗತ್ಯತೆಗೆ ಅನುಗುಣವಾಗಿ ಆಸ್ಪತ್ರೆ ಮುಂತಾದ ಸ್ಥಳಗಳಿಗೆ ತೆರಳಲು ಪ್ರಯಾಣಿಕರ ಸೇವೆಯ ಹಿತದೃಷ್ಟಿಯಿಂದ ಇಂದು 20 ನೂತನ ಬೊಲೆರೋ ವಾಹನಗಳನ್ನು ಖರೀದಿಸಿ ಚಾಲನೆ ನೀಡಲಾಗಿದೆ.
ವಿದ್ಯಾರ್ಥಿ ವೇತನ: ನಿಗಮವು ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ಈ ಮೊದಲು ಕೈಗಾರಿಕಾ ತರಬೇತಿ, ಪದವಿ (ಬಿಇ, ಬಿಎಸ್ಸಿ) ಹಾಗೂ ಸ್ನಾತಕ್ಕೋತರ ಪದವಿಗಳ ವ್ಯಾಸಂಗಕ್ಕಾಗಿ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಈಗ ಯೋಜನೆ ಪರಿಷ್ಕರಿಸಿ ಹೆಚ್ಚಿನ ವಿದ್ಯಾಭ್ಯಾಸಗಳನ್ನು ಸ್ಕಾಲರ್ ಶಿಪ್ ವ್ಯಾಪ್ತಿಗೆ ಸೇರಿಸಿ ನೂತನ ಸಾರಿಗೆ ವಿದ್ಯಾ ಚೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆ ಅಡಿ ಹಿಂದಿನಗಿಂತಲೂ 3 ರಿಂದ 5½ ಪಟ್ಟು ಅಧಿಕ ಸ್ಕಾಲರ್ ಶಿಪ್‌ನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೂತನವಾಗಿ ಪಿಯುಸಿ, ಪದವಿ ಬಿ.ಎ., ಬಿಕಾಂ, ಪಿಎಚ್‌ಡಿ ಹಾಗೂ ವಿದೇಶದಲ್ಲಿ ಮಾಡುತ್ತಿರುವ ಪದವಿ ವ್ಯಾಸಂಗವನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ. ಈ ಯೋಜನೆಯನ್ನು ಪಾರದರ್ಶಕತೆಗೊಳಿಸಲು, ತ್ವರಿತತೆ ಹಾಗೂ ನಿಖರತೆಗಾಗಿ ಗಣಕೀಕರಣಗೊಳಿಸಲಾಗಿದೆ.
ಶಕ್ತಿ ಯೋಜನೆ: ನಿಯತಕಾಲಿಕೆ ಬಿಡುಗಡೆ. ಸಾರಿಗೆ ನಿಗಮವು ಪ್ರತಿ ಮೂರು ತಿಂಗಳಿಗೊಮ್ಮೆ ನಿಗಮದ ಚಟುವಟಿಕೆಗಳ ಕುರಿತು ಆಂತರಿಕ ನಿಯತಕಾಲಿಕ ಸಾರಿಗೆ ಸಂಪದವನ್ನು ಬಿಡುಗಡೆ ಮಾಡುತ್ತದೆ. ಜೂನ್ 11ರಂದು ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿ ಆಗಿದೆ. ಯೋಜನೆಯ ಕುರಿತು ಹಿರಿಯ ಲೇಖಕರು ಬರೆದಿರುವ ವಿಶಿಷ್ಟ ಲೇಖನಗಳು, ಶಕ್ತಿ ಯೋಜನೆಯ ಪರಿಣಾಮ, ಶಕ್ತಿ ಯೋಜನೆಯ ಅನುಕೂಲತೆ ಬಗ್ಗೆ ಸಾರ್ವಜನಿಕರ ಅನಿಸಿಕೆ, ಅಭಪ್ರಾಯ, ಕವನಗಳು ಇನ್ನಿತರ ಅಂಶಗಳನ್ನು ಈ ನಿಯತಕಾಲಿಕೆ ಒಳಗೊಂಡಿದೆ.
ಅನುಕಂಪದ ಆಧಾರದ ಮೇಲೆ ನೇಮಕಾತಿ: ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಸಿಬ್ಬಂದಿಗಳ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡಲು ನಿರ್ಧರಿಸಲಾಗಿದೆ. ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 14 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪಕ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರಲ್ಲಿ 10 ಅವಲಂಬಿತರನ್ನು ತಾಂತ್ರಿಕ ಹುದ್ದೆಗಳಲ್ಲಿ ಮತ್ತು 4 ಅವಲಂಬಿತರನ್ನು ಚಾಲಕ-ನಿರ್ವಾಹಕ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಅವರಿಗೆ ನೇಮಕಾತಿ ಆದೇಶವನ್ನು ಇಂದಿನ ಕಾರ್ಯಕ್ರಮದಲ್ಲಿ ನೀಡಲಾಯಿತು.