ಮಡಿಕೇರಿ: ಇಷ್ಟರಲ್ಲೇ ಕೊಡಗಿನದಾದ್ಯಂತ ಮಳೆ ಸುರಿದು ಇಡೀ ವಾತಾವರಣ ತಣ್ಣಗಾಗಿ, ಬಿಸಿಲಿಗೆ ಒಣಗಿದ ಪರಿಸರ ಹಸಿರಿನಿಂದ ಕಂಗೊಳಿಸಬೇಕಾಗಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದೆಯಾದರೂ ಅದರಿಂದ ಯಾವುದೇ ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಇದರಿಂದಾಗಿ ಮಳೆಗಾಗಿ ಕಾಯುತ್ತಿರುವ ಕಾಫಿ ಬೆಳೆಗಾರ ಸಂಕಷ್ಟಕ್ಕೀಡಾಗಿದ್ದಾನೆ.
ಕೊಡಗಿನಲ್ಲಿ ಕಾಫಿ ಬೆಳೆಗಾರರ ಪರಿಸ್ಥಿತಿ ಹೇಗಾಗಿದೆ ಎಂದರೆ ಬೆಕ್ಕಿಗೆ ಆಟ ಇಲಿಗೆ ಸಂಕಟ ಎಂಬಂತಾಗಿದೆ. ಕಾರಣ ಈ ಸಮಯದಲ್ಲಿ ಮಳೆ ಸುರಿದರೆ ಜೋರಾಗಿಯೇ ಸುರಿಯಬೇಕು. ಒಂದು ವೇಳೆ ಅಲ್ಪಪ್ರಮಾಣದಲ್ಲಿ ಮಳೆ ಸುರಿದರೆ ಅದರ ಪರಿಣಾಮ ಕಾಫಿ ಹೂವಿನ ಮೇಲಾಗುತ್ತದೆ. ಹೀಗಾಗಿ ಬಹುತೇಕ ಬೆಳೆಗಾರರು ಮುಗಿಲತ್ತ ದೃಷ್ಟಿ ನೆಟ್ಟು ಮಳೆಗಾಗಿ ಕಾಯುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿದೆಯಾದರೂ ಅದರಿಂದ ಯಾವುದೇ ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಮಾರ್ಚ್ ಹೊತ್ತಿಗೆ ಕಾಫಿ ಕೊಯ್ಲು ಮುಗಿಸಿ ಬೆಳೆಗಾರರು ತಾವು ಹೊಂದಿರುವ ಜಲ ಮೂಲಗಳಿಂದ ನೀರನ್ನು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ.
ಆದರೆ ಕಳೆದ ವರ್ಷ ಮುಂಗಾರು ಕೈಕೊಟ್ಟ ಕಾರಣ ಕೆರೆಗಳಲ್ಲಿ ನೀರು ಖಾಲಿಯಾಗಿತ್ತು. ನದಿಗಳಲ್ಲಿಯೂ ನೀರು ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಜತೆಗೆ ನದಿಯಿಂದ ನೀರು ಹಾಯಿಸದಂತೆ ಆದೇಶ ಮಾಡಿದ್ದರಿಂದ ಬಹುತೇಕ ಬೆಳೆಗಾರರು ಮಳೆಯನ್ನೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷವನ್ನು ಹೊರತು ಪಡಿಸಿದರೆ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿಯೇ ಕೊಡಗಿನಲ್ಲಿ ಮಳೆ ಸುರಿದಿತ್ತು. ಹೀಗಾಗಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಕಳೆದ ವರ್ಷ ಬೇಸಿಗೆಯಲ್ಲಿ ಮಳೆ ಸುರಿಯದೆ ಕಾಫಿ ಬೆಳೆಗಾರರಿಗೆ ಸಮಸ್ಯೆ ತಂದೊಡ್ಡಿತ್ತು. ಈ ಬಾರಿಯೂ ಅದೇ ಪುನರಾವರ್ತನೆಯಾಗಿದೆ. ಇದುವರೆಗೆ ಮಳೆ ಜಿಲ್ಲೆಯಾದ್ಯಂತ ಸಮರ್ಪಕವಾಗಿ ಸುರಿದಿಲ್ಲ.
ಜಿಲ್ಲೆಯ ಕೆಲವು ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದ್ದರೆ, ಬಹಳಷ್ಟು ಗ್ರಾಮಗಳಿಗೆ ಒಂದು ಹನಿಯೂ ಬಿದ್ದಿಲ್ಲ. ಪರಿಣಾಮ ಬಿಸಿಲ ಝಳಕ್ಕೆ ಕಾಫಿ, ಕರಿಮೆಣಸು ಗಿಡಗಳು ಒಣಗಲಾರಂಭಿಸಿವೆ. ಜತೆಗೆ ಒಂದೆರಡು ಹನಿಯಷ್ಟೇ ಉದುರಿದ ಸ್ಥಳಗಳಲ್ಲಿ ಕಾಫಿ ಮೊಗ್ಗು ಬಂದಿದ್ದು, ಅದು ಅರಳಲು ಸಾಧ್ಯವಾಗದೆ ಬಿಸಿಲಿಗೆ ಒಣಗುತ್ತಿದ್ದು, ಇದರಿಂದ ಫಸಲು ನಾಶವಾಗುವ ಭಯ ಕಾಡುತ್ತಿದೆ.
ಮಳೆ ಅಥವಾ ಸ್ಪ್ರಿಂಕ್ಲರ್ ಮಾಡಿದ ನಂತರ ಹೂ ಬಿಡಲಿದ್ದು ಹೂ ಬಿಟ್ಟ ನಂತರ ಮಳೆ ಬರಬೇಕು ಅಥವಾ ನೀರು ಹಾಯಿಸಬೇಕು ಇಲ್ಲದೆ ಹೋದರೆ ಬಿಸಿಲಿಗೆ ಮಿಡಿಕಚ್ಚದೆ ಫಸಲು ನಾಶವಾಗುವ ಸಾಧ್ಯತೆಯಿದೆ. ಈ ಬಾರಿ ಮೊದಲು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದವರು ಸಂಕಷ್ಟಕ್ಕೀಡಾಗಿದ್ದಾರೆ. ಕಾರಣ ಈಗ ಮತ್ತೊಮ್ಮೆ ನೀರು ಹಾಯಿಸಲು ನೀರೇ ಇಲ್ಲದಂತಾಗಿದೆ. ಹೀಗಾಗಿ ಮಳೆಯನ್ನೇ ಕಾದು ಕುಳಿತಿದ್ದಾರೆ.
ಕಳೆದ ಒಂದೆರಡು ದಿನದಿಂದ ಕೊಡಗಿನ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆಯಾದರೂ ಮಳೆ ಸುರಿಯದ ಪ್ರದೇಶಗಳಲ್ಲಿರುವ ಜನರು ಮಾತ್ರ ಯಾವಾಗ ಮಳೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಕಾವೇರಿ ಸೇರಿದಂತೆ ಕೊಡಗಿನಲ್ಲಿರುವ ನದಿಗಳೆಲ್ಲವೂ ಬತ್ತಿವೆ. ಮಳೆ ಬಿದ್ದರಷ್ಟೆ ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲು ಸಾಧ್ಯ. ಹೀಗಾಗಿ ಎಲ್ಲರ ದೃಷ್ಟಿ ಮುಗಿಲತ್ತ ನೆಟ್ಟಿದೆ. ಮಳೆ ಬರಲಿ ಎನ್ನುವುದಷ್ಟೆ ಪ್ರಾರ್ಥನೆ.