ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಇದೇ ಅ.29ರಂದೆ ವೇತನ ನಿಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಕೇಂದ್ರ ಕಚೇರಿಯ ಲೆಕ್ಕ ಪತ್ರ ಶಾಖೆಗೆ ನಿರ್ದೇಶನ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ವಲಯ ನೌಕರರ ಕೂಟದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದ್ದಕ್ಕೆ ಸ್ಪಂದಿಸಿದ ಎಂಡಿ ಅವರು ಅಕ್ಟೋಬರ್ 2024ರ ಮಾಹೆಯ ವೇತನವನ್ನು ದೀಪಾವಳಿ ಹಬ್ಬಕ್ಕಿಂತ ಮೊದಲೇ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ದೀಪಾವಳಿ ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆ ಇರುವುದರಿಂದ ಅಕ್ಟೋಬರ್ ಸಂಬಳವನ್ನು ದೀಪಾವಳಿ ಹಬ್ಬದ ಮುಂಚೆಯೇ ನೌಕರರಿಗೆ ಪಾವತಿಸುವಂತೆ ವ್ಯವಸ್ಥಾಪಕ ನಿರ್ದೇಶಕರಲ್ಲಿ ನೌಕರರ ಕೂಟದ ಕಲಬುರಗಿ ವಲಯ ಪದಾಧಿಕಾರಿಗಳು ಇಂದು ಮನವಿ ಪತ್ರ ಕೊಟ್ಟು ಮನವಿ ಮಾಡಿದೆವು. ಅದಕ್ಕೆ ಸ್ಪಂದಿಸಿದ ಎಂಡಿ ಅವರು ಈ ನಿರ್ದೇಶನ ನೀಡಿದ್ದಾರೆ ಎಂದು ಕೂಟದ ಬೀದರ್ ಅಧ್ಯಕ್ಷ ಬಸವರಾಜ ಚಾಮರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ಪ್ರತಿ ತಿಂಗಳೂ ಎರಡು ಅಥವಾ ಮೂರನೇ ತಾರೀಖಿಗೆ ವೇತನ ಪಾವತಿಸುತಿಸುತ್ತಿರುವುದರಿಂದ ನೌಕರರು ತುಂಬಾ ಸಂತಸದಲ್ಲಿದ್ದಾರೆ.
ಆದರೆ, ನಾಡಿನ ಅತ್ಯಂತ ದೊಡ್ಡ ಹಬ್ಬ ದಸರಾ ಹಬ್ಬವು ಈಗ ತಾನೇ ಮುಗಿದು ಇನ್ನೊಂದು ದೊಡ್ಡ ಹಬ್ಬ ದೀಪಾವಳಿ ಸಹ ಸಮೀಪಿಸುತ್ತಿದೆ. ಈ ದೀಪಾವಳಿ ಹಬ್ಬವು ಅಕ್ಟೋಬರ್ ಮಾಹೆಯ ಕೊನೆಯ ದಿನದಲ್ಲಿ ಅದು ಅದೃಷ್ಟವೆಂಬಂತೆ ನಮ್ಮ ನಿಗಮದ ಸಂಸ್ಥಾಪನ ದಿನಚರಣೆ, ಕರ್ನಾಟಕ ರಾಜ್ಯೋತ್ಸವ ಹಬ್ಬದ ಜತೆಯಲ್ಲಿ ಬಂದಿದೆ.
ಈ ನಡುವೆ 31-10-2024 ರಿಂದ 02-11-2024ರವರೆಗೆ ಸಾರ್ವತ್ರಿಕ ರಜೆ ಹಾಗೂ 03-11-2024ರಂದು ರವಿವಾರ ರಜೆ ಇರುವ ಕಾರಣ ಒಟ್ಟು 4 ದಿನ ರಜೆ ಇರುವುದರಿಂದ ನೌಕರರಿಗೆ ವೇತನ ಸಿಗುವುದು ಹಬ್ಬ ಆದ ನಂತರ.
ಹೀಗಾಗಿ ಈಗ ತಾನೆ ದಸರಾ ಹಬ್ಬ ಆಚರಿಸಿ ಕೈ ಖಾಲಿಯಲ್ಲಿರುವ ನೌಕರರಿಗೆ ಈ ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ಆರ್ಥಿಕ ತೊಂದರೆ ಆಗಬಹುದೆಂದು ತಿಳಿದೂ ಸಹ, ನಿಗಮದ ನೌಕರರ ಅನುಕೂಲಕ್ಕಾಗಿ ಹಾಗೂ ಸಂಸ್ಥಾಪನಾ ದಿನಚರಣೆಯ ವಿಶೇಷವಾಗಿ ಬಂಪರ್ ಎಂಬಂತೆ ಅಕ್ಟೋಬರ್ ಮಾಹೆಯ ವೇತನವನ್ನು ದೀಪಾವಳಿ ಹಬ್ಬಕ್ಕಿಂತ ಮೊದಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವು ಅದಕ್ಕೆ ಸಾಹೇಬರು ಸ್ಪಂದಿಸಿದ್ದಾರೆ ಎಂದರು.
ಕೂಟದ ಬೀದರ್ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶಿವಯೋಗಿ, ಕಲಬುರಗಿ ಅಧ್ಯಕ್ಷ ಜರಾಂ ರಾಠೋಡ್ ಮತ್ತಿತರರು ಮನವಿ ಸಲ್ಲಿಸಿದ್ದರು.