ಬೆಂಗಳೂರು: ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಮೆಟ್ರೋ ರೈಲು ಬರುತ್ತಿದ್ದಂತೆ ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನೇರಳೆ ಮಾರ್ಗದ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಶಾಂತಗೌಡ ಪಾಟೀಲ್ (38) ಆತ್ಮಹತ್ಯೆ ಮಾಡಿಕೊಂಡ ವಿಜಯಪುರ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶಾಂತಗೌಡ ಪಾಟೀಲ್ ಅವರು ಬೆಂಗಳೂರಿನ ರಾಜಾಜಿನಗರದಲ್ಲಿ ಪತ್ನಿ ಹಾಗೂ ಪುಟ್ಟ ಕಂದಮ್ಮನೊಂದಿಗೆ ವಾಸವಾಗಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಇಂದು ಬೆಳಗ್ಗೆ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೆಟ್ರೋ ಬರುತ್ತಿದ್ದಂತೆಯೇ ಶಾಂತಗೌಡ ಪಾಟೀಲ್ ಟ್ರ್ಯಾಕ್ಗೆ ಹಾರಿದ್ದಾರೆ, ಪರಿಣಾಮ ಮೆಟ್ರೋ ಹರಿದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮೆಟ್ರೋ ಸಿಬ್ಬಂದಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು ಬಳಿಕ ಮೃತ ದೇಹವನ್ನು ಟ್ರ್ಯಾಕ್ನಿಂದ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ನೇರಳೆ ಮಾರ್ಗದಲ್ಲಿ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿ, ಚಲ್ಲಘಟ್ಟದಿಂದ ನಾಯಂಡಹಳ್ಳಿವರೆಗೆ ಮೆಟ್ರೋ ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಟ್ರ್ಯಾಕ್ ಮೇಲಿದ್ದ ಶವವನ್ನು ತೆರವುಗೊಳಿದ್ದರಿಂದ ಈಗ ಮೆಟ್ರೋ ಸಂಚಾರ ಎಂದಿನಂತೆ ಇದೆ.
Related










