ಧಾರವಾಡ: ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಘಟನೆ ಧಾರವಾಡದಲ್ಲಿ ಜರುಗಿದ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಂಜನಗೂಡು ಉಪಚುನಾವಣೆಯಲ್ಲಿ ನನಗೆ ಸೊಂಟಕ್ಕೆ ಪೆಟ್ಟಾಗಿತ್ತು. ಒಳಗಡೆ ಕೀವಾಗಿ ಕಾಲು ಅಲುಗಾಡಿಸದಂತಾಗಿತ್ತು. ಅಂದಿನಿಂದ ಸಮಸ್ಯೆ ಇದೆ. ಹೀಗಾಗಿ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಾಗಿ ಸಮರ್ಥನೆ ನೀಡಿದರು.
ನನಗೆ ಕುಳಿತರೆ ಬೇಗ ಏಳಲು ಆಗೋದಿಲ್ಲ, ಬಗ್ಗಲು ಕೂಡ ಸಾಧ್ಯವಾಗೋದಿಲ್ಲ. ಎಷ್ಟೋ ಜನ ಕಾಲು ಮುಂದಕ್ಕೆ ಇಟ್ಟು ನಮಸ್ಕಾರ ಮಾಡಿಸಿಕೊಳ್ಳೋರಿದ್ದಾರೆ. ಹಾಗೆ ನಾನು ಮಾಡುವವನಲ್ಲ. ನೀವು ಇದನ್ನು ಗಮನಿಸಿದ್ದು ಸಂತಸ ತಂದಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.
ಆಪರೇಷನ್ ಕಮಲ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಮಹದೇವಪ್ಪ, ನಮ್ಮ ಅಧ್ಯಕ್ಷರಿಗೆ ಮಾಹಿತಿ ಇರುತ್ತೆ. ಹೀಗಾಗಿ ಅವರು ಹೇಳಿರುತ್ತಾರೆ. ನಾನು ಅಧಿಕಾರಿಗಳ ಸಭೆಯಲ್ಲಿದ್ದೇನೆ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗಿಂತ ಮಾಧ್ಯಮಗಳಿಗೇ ಹೆಚ್ಚು ಮಾಹಿತಿ ಇದೆ ಎಂದರು.
ಬಹುಮತವಿಲ್ಲದೇ ಬಿಜೆಪಿ 2 ಸಲ ಅಧಿಕಾರಕ್ಕೆ ಬಂದಿದೆ. ಅದು ಹೇಗೆ ಬಂದಿದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಇತಿಹಾಸವೇ ಹಾಗಿದೆ. ಆ ಇತಿಹಾಸವನ್ನು ಮಾಧ್ಯಮದವರೇ ಹೇಳಲಿ ಎಂದ ಅವರು. ಬಿಜೆಪಿ ಶಾಸಕರು, ಎಸ್.ಟಿ. ಸೋಮಶೇಖರ್ ಬರದ ಬಗ್ಗೆ ನೀಡುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸೋಮಶೇಖರ್ ಸರಿಯಾಗಿಯೇ ಹೇಳಿದ್ದಾರೆ. ಅವರು ಆ ಬಗ್ಗೆ ಕರಾರುವಕ್ಕಾಗಿ ಹೇಳಿದ್ದಾರೆ ಎಂದರು.
ಇನ್ನು ಅವರು ಕೇಂದ್ರಕ್ಕೆ ಹೋಗಿ ಹೇಳಿ ಅಂದಿದ್ದಾರೆ. ಬರದ ಎಲ್ಲ ವರದಿಯನ್ನು ನೀಡಲಾಗಿದೆ. ರಾಜ್ಯದ ಜನರ ಹಿತ ಕಾಯಬೇಕೆಂದಿದ್ದರೆ ಕೇಂದ್ರಕ್ಕೆ ಕೇಳಲಿ. ಸಂಕಷ್ಟದಲ್ಲಿರೋ ರೈತರಿಗೆ ಪರಿಹಾರ ಕೊಡಬೇಕೆಂದರೆ ಕೇಂದ್ರವನ್ನು ಕೇಳಲಿ. 4,000 ಕೋಟಿ ರೂ. ಕೇಳಲಾಗಿದೆ. ದಯವಿಟ್ಟು ಆ ಹಣವನ್ನು ನೀಡುವಂತೆ ಕೇಳಲಿ ಎಂದು ಮಹದೇಪ್ಪ ಹೇಳಿದರು.