ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರಿನ ಸ್ಥಳೀಯ ನೌಕರರ ಸಮಸ್ಯೆಗಳ ಬಗೆಹರಿಸುವಂತೆ ಸಾರಿಗೆ ನೌಕರರ ಕೂಟದ ರಾಜ್ಯ ಗೌರವಾಧ್ಯಕ್ಷ ಬಿ.ಎಸ್.ಸುರೇಶ್ ನೇತೃತ್ವದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಂದು ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಸಾರಿಗೆ ಸಚಿವರನ್ನು ಭೇಟಿ ಮಾಡಿದ ಸಾರಿಗೆ ನೌಕರರ ಕೂಟದ ಸಿ.ಡಿ. ವಿಶ್ವನಾಥ್, ಮಾಜಿ ಅಧ್ಯಕ್ಷರಾದ ಮಂಜೇಗೌಡ, ರವಿ, ನಿರ್ದೇಶಕರಾದ ಮಂಜುನಾಥ, ಭೀಮೇಶ್ ಇನ್ನಿತರ ಪದಾಧಿಕಾರಿಗಳು ಮೈಸೂರಿನ ಸ್ಥಳೀಯ ನೌಕರರ ಸಮಸ್ಯೆಗಳ ಬಗ್ಗೆ ತಿಳಿಸಿದರು.
ನೌಕರರು ಹೇಳುತ್ತಿದ್ದ ಸಮಸ್ಯೆಗಳನ್ನು ತಾಳ್ಮೆಯಿಂದಲೇ ಆಲಿಸಿದ ಸಚಿವರು ಕೂಡಲೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದರು.
ಬಳಿಕ ಕೂಟದ ರಾಜ್ಯ ಗೌರವಾಧ್ಯಕ್ಷ ಬಿ.ಎಸ್.ಸುರೇಶ್ ಅವರು ರಾಜ್ಯ ವ್ಯಾಪಿ ನೌಕರರ ಸಮಸ್ಯೆಯಾಗಿ ಕಾಡುತ್ತಿರುವ ವೇತನ ಹೆಚ್ಚಳದ ಬಗ್ಗೆ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಈ ವೇಳೆ ಅತಿ ಶೀಘ್ರದಲ್ಲಿ ಸಭೆ ಕರೆಯುವಂತೆ ಒತ್ತಾಯಿಸಿದರು.
ಎಲ್ಲವನ್ನು ಸಮಚಿತ್ತದಿಂದ ಆಲಿಸಿದ ಸಚಿವರು ನಾವು ಕೂಡ ಅದೆ ಆಲೋಚನೆಯಲ್ಲಿ ಇದ್ದೇವೆ ಅತಿ ಶೀಘ್ರದಲ್ಲೇ ಸಭೆ ಕರೆದು ಈ ಪ್ರಮುಖವಾಗಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ದೃಢ ವಿಶ್ವಾಸ ಮೂಡಿಸುವ ಭರವಸೆ ನೀಡಿದರು ಎಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಗ್ರಿಮೆಂಟೇ ಆಗುವುದು: ಒಟ್ಟಾರೆ ಈ ಬಾರಿಯೂ ಸರಿ ಸಮಾನ ವೇತನವನ್ನು ಸಿದ್ದರಾಮಯ್ಯ ಸರ್ಕಾರ ಮಾಡುವುದಿಲ್ಲ ಅಗ್ರಿಮೆಂಟೇ ಆಗುವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು, ನೌಕರರು ಹೋರಾಟಕ್ಕೆ ದುಮುಕಿದರೆ ಮತ್ತೊಮ್ಮೆ ವೇತನ ಪರಿಷ್ಕರಣೆ ಮಾಡಲಿದೆ ಎಂದು ಬಹುತೇಕ ಖಚಿತ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಈ ಬಾರಿಯೂ ನೌಕರರು ಅಂದಿಕೊಂಡಿರುವಂತೆ ಸರಿ ಸಮಾನ ವೇತನ ವಾಗುವುದಿಲ್ಲ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಇನ್ನು ಮುಷ್ಕರ ಮಾಡದ ಹೊರತು ಈ ವೇತನ ಪರಿಷ್ಕರಣೆಯನ್ನೂ ಸರ್ಕಾರ ಮಾಡುವುದಿಲ್ಲ ಎಂದು ತಿಳಿದು ಬಂದಿದ್ದು, ಸಂಘಟನೆಗಳು ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತವೋ ಎಂಬುವುದು ಭಾರಿ ಕುತೂಹಲವಾಗಿ ಉಳಿದಿದೆ.
Related










