ಹುಬ್ಬಳ್ಳಿ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆಯ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರು, ಈ ಹಿನ್ನೆಲೆಯಲ್ಲಿ ನಷ್ಟದ ಮಾರ್ಗದಲ್ಲಿದ್ದ ಸಂಚರಿಸುತ್ತಿದ್ದ ಬಸ್‌ಗಳು ಸದ್ಯ ಲಾಭದತ್ತ ದಾಪುಕಾಲು ಹಾಕುತ್ತಿವೆ. ಇದು ‘ಶಕ್ತಿ’ ಯೋಜನೆಯಿಂದ ಸಾಧ್ಯವಾಗಿದೆ.
ಹೌದು! ‘ಶಕ್ತಿ’ ಯೋಜನೆ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬೆಳಗಾವಿ, ಚಿಕ್ಕೋಡಿ ವಿಭಾಗಗಳು ಸೇರಿದಂತೆ ಬಮಹುತೆಕ ಎಲ್ಲ ವಿಭಾಗಗಳಲ್ಲೂ ಪ್ರತಿ ದಿನದ ಪ್ರಯಾಣಿಕರ ಸಂಖ್ಯೆ ಸರಾಸರಿ 4.5ಲಕ್ಷದಷ್ಟು ಹೆಚ್ಚಾಗಿದೆ.
ಮಹಿಳೆಯರಿಗೆ ಶೂನ್ಯ ಮೊತ್ತದ ಟಿಕೆಟ್ ವಿತರಣೆ ಬಳಿಕ ನಿತ್ಯದ ಪ್ರಯಾಣಿಕರ ಸಂಖ್ಯೆ 7.65 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ 3.40 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ. 2023ರ ಜೂನ್ 11 ರಿಂದ ಆ.2 ರ ವರೆಗೆ ಒಟ್ಟು 32.04 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಈ ಪೈಕಿ 20.13 ಕೋಟಿ ಮಹಿಳಾ ಪ್ರಯಾಣಿಕರಿದ್ದಾರೆ. ಶಕ್ತಿ ಯೋಜನೆಯ ಶೂನ್ಯ ಟಿಕೆಟ್‌ನಿಂದ 473.48 ಕೋಟಿ ರೂ. ಆದಾಯ NWKRTCಗೆ ಬಂದಿದೆ.
ಖರ್ಚಿಗೆ ತಕ್ಕಷ್ಟು ಆದಾಯ ಇಲ್ಲದೇ ನಷ್ಟದ ಸುಳಿಗೆ ಸಿಲುಕಿದ್ದ NWKRTC ಬಸ್ ಕಾರ್ಯಾಚರಣೆಗೂ ಹಿಂದೇಟು ಹಾಕುವಂತಾಗಿತ್ತು. ಆದರೆ, ಈಗ ಯಾವುದೇ ಮಾರ್ಗದಲ್ಲಿ ಸಂಚರಿಸಿದರೂ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.62.80 ರಷ್ಟು ಮಹಿಳಾ ಪ್ರಯಾಣಿಕರಿದ್ದರೆ, ಶೇ.37.20 ರಷ್ಟು ಪುರುಷ ಪ್ರಯಾಣಿಕರಿದ್ದಾರೆ.
ಆದರೆ, ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರು ಸಂಚರಿವುದರಿಂದ ಟಿಕೆಟ್ ಕೊಡಲು ನಿರ್ವಾಹಕರು ಪರದಾಡುವಂತಾಗಿದೆ. ಹೀಗಿದ್ದರೂ ಬಸ್‌ಗಳ ಸಂಖ್ಯೆ ಹೆಚ್ಚಾಗದ ಕಾರಣ ಇದ್ದ ಬಸ್‌ಗಳಲ್ಲೇ ಪ್ರಯಾಣಿಕರು ಪರದಾಡಿಕೊಂಡೆ ಪ್ರಯಾಣಿಸುವಂತಾಗಿದೆ.
ಇನ್ನು ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ತುಂಬಿರುವುದರಿಂದ ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರದ ಸಮಯ ಬದಲಾಯಿಸಿದರೂ ಆ ಬಸ್‌ಗಳಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಹೆಚ್ಚು ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.