KSRTC ಅನಿರ್ದಿಷ್ಟಾವಧಿ ಮುಷ್ಕರ: ಕರ್ತವ್ಯಕ್ಕೆ ಗೈರಾದ ಸಾರಿಗೆ ನೌಕರರಿಗೆ ಎದುರಾಯಿತು ಕೆಲಸ ಕಳೆದುಕೊಳ್ಳುವ ಭೀತಿ!


ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದ ಸಾರಿಗೆ ನೌಕರರಿಗೆ ಇದೀಗ ಅಮಾನತು ಇಲ್ಲವೇ ಕರ್ತವ್ಯದಿಂದಲೇ ವಜಾಗೊಳ್ಳುವ ಭೀತಿ ಎದುರಾಗಿದೆ.
ಏಕೆಂದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುವಂತಿಲ್ಲ. ಹಾಗೊಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಅಂತಹ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ನೌಕರರ ವಿರುದ್ದ ಅಗತ್ಯ ಸೇವಾ ನಿರ್ವಾಹಣೆ ಕಾಯ್ದೆ(ಎಸಾ)ಯಡಿ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂದು ಈಗಾಗಲೇ ನಿನ್ನೆ ಕರ್ತವ್ಯಕ್ಕೆ ಬಾರದ ಸಾರಿಗೆ ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಈ ಹಿಂದೆ ಇದೇ ರೀತಿ ವೈದ್ಯರು ರಾಜ್ಯದಾದ್ಯಂತ ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಲು ಮುಂದಾದಾಗ ಅವರ ವಿರುದ್ಧ ಎಸ್ಮಾ ಕಾಯ್ದೆ ಅಸ್ತ್ರ ಬಳಸಲು ಸರ್ಕಾರ ಮುಂದಾಗಿತ್ತು. ಕೊನೆಗೆ ನ್ಯಾಯಾಲಯ ಮಧ್ಯ ಪ್ರವೇಶಿಸಿ ವೈದ್ಯರಿಗೆ ಛೀಮಾರಿ ಹಾಕಿದ್ದರಿಂದ ಪ್ರತಿಭನಟನೆಯಿಂದ ಹಿಂದೆ ಸರಿದಿದ್ದರು.
ಅದೇ ರೀತಿ ಈಗ ಹೈ ಕೋರ್ಟ್‌ನಲ್ಲಿ PIL ಅರ್ಜಿ ವಿಚಾರಣೆ ಇರುವಾಗ ನಿಮ್ಮ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಎಂದು ಕೋರ್ಟ್ ಹೇಳಿತ್ತು. ಆದರೆ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಮುಷ್ಕರ ಮಾಡಿದ್ದರಿಂದ ನಿನ್ನೆ ಕೋರ್ಟ್ ಛೀಮಾರಿ ಹಾಕಿದ್ದರಿಂದ ಇಂದು ಸಾರಿಗೆ ನೌಕರರು ಪ್ರತಿಭನಟನೆಯಿಂದ ಹಿಂದೆ ಸರಿದಿದ್ದಾರೆ.
ಆದರೆ, ಇದೀಗ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿರುವ ಕಾರಣ ನೂರಾರು ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದರಿಂದ ಈಗ ಅಮಾನತು ಅಥವಾ ವಜಾ ಭೀತಿ ಎದುರಿಸುತ್ತಿದ್ದಾರೆ.
ಕೋರ್ಟ್ ನಿರ್ದೇಶನದ ಪಾಲಿಸದೆ ಸಾರಿಗೆ ನೌಕರರು ಮುಷ್ಕರ ಮಾಡಿದ್ದರು. 2021ರಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ಮಾಡಿದಾಗಲೂ ಕೂಡ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಈ ಬಾರಿಯೂ ನೌಕರರ ಮೇಲೆ ಕೇಸ್ ಬೀಳುವ ಭೀತಿ ಇದೆ.

ಇನ್ನು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಮತ್ತು 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಸಂಬಂಧ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಸದ್ಯ ಇನ್ನು ಎರಡು ದಿನ ಮುಷ್ಕರ ಮಾಡದಂತೆ ಹೈ ಕೋರ್ಟ್ ನಿರ್ದೇಶನ ನೀಡಿದೆ.
ಇನ್ನು ನಿನ್ನೆ ಡಿಪೋಗಳಲ್ಲಿ ಬಸ್ ನಿಲ್ಲಿಸಿ ಕರ್ತವ್ಯಕ್ಕೆ ಗೈರಾಗಿರುವ ಸಾರಿಗೆ ನೌಕರರು ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನೌಕರರಿಗೆ ಅಮಾನತುಗೊಳ್ಳುವ ಭೀತಿ ಎದುರಾಗಿದೆ. ನೌಕರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈಗಾಲೇ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಇದು ಯಾವ ಹಂತ ತಲುಪುತ್ತದೋ ಎಂಬುವುದು ನಾಳೆಯೊಳಗೆ ಗೊತ್ತಾಗಲಿದೆ.
Related
