ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವೂ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಈವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಾರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಜು.4ರಂದು ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಪಾವತಿ ಸಂಬಂಧ ಚರ್ಚಿಸಲು ಮತ್ತೆ ಒಂದು ವಾರದೊಳಗೆ ಸಭೆ ಕರೆಯುವುದಾಗಿ ಭರವಸೆ ನೀಡಿ ಅಂದಿನ ಸಭೆಯನ್ನು ಮುಂದೂಡಿದ್ದರು. ಆದರೀಗ 12 ದಿನ ಕಳೆದರೂ ಸಭೆ ಕರೆದಿಲ್ಲ. ಹೀಗಾಗಿ, ಮುಷ್ಕರ ನಡೆಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
2020ರ ಜ.1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅದರ 38 ತಿಂಗಳ ಹಿಂಬಾಕಿ ಪಾವತಿ, 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಭೆ ನಡೆದಿದೆ. ಆದರೂ ಈವರೆಗೂ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ ಕಾರಣ, ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಲಾಗಿದ ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
Related
