
ಬೆಂಗಳೂರು: 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ವತ್ತನ್ನು ನಾಲ್ಕೈದು ಮಂದಿ ಭ್ರಷ್ಟಾತಿ ಭ್ರಷ್ಟ ಅಧಿಕಾರಿಗಳು ಪ್ರಭಾವೀ ಖಾಸಗಿ ಬಿಲ್ಡರ್ ಒಬ್ಬನ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಬೃಹತ್ ಭೂ ಹಗರಣ” ನಡೆದೊದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿದ ಮೊಟ್ಟ ಮೊದಲ ಎರಡು ಬಡಾವಣೆಗಳ ಪೈಕಿ ಒಂದು ಎಂಬ ಖ್ಯಾತಿಯ ಮತ್ತು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡ ಏಷ್ಯದ ಪ್ರಪ್ರಥಮ ಬಡಾವಣೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಯನಗರ ಬಡಾವಣೆಯ ಒಂದನೇ ಬ್ಲಾಕಿನಲ್ಲಿರುವ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ (ಮುಕ್ಕಾಲು ಎಕರೆ) ಸ್ವತ್ತೂ ಸೇರಿದಂತೆ ನೂರಾರು ಎಕರೆ ವಿಸ್ತೀರ್ಣದ ಸ್ವತ್ತುಗಳನ್ನು 1948ರಲ್ಲಿ City Improvement Trust Board (CITB ಅಥವಾ ಈಗಿನ BDA) ಜಯನಗರ ಬಡಾವಣೆ ನಿರ್ಮಾಣಕ್ಕೆಂದು ಭೂಸ್ವಾಧೀನಪಡಿಸಿಕೊಂಡಿತ್ತು.
ಈ ರೀತಿ ಭೂಸ್ವಾಧೀನಪಡಿಸಿಕೊಂಡಿದ್ದ ನೂರಾರು ಎಕರೆಗಳಷ್ಟು ವಿಸ್ತೀರ್ಣದ ಜಮೀನುಗಳ ಪೈಕಿ, ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ (32,670 ಚ. ಅಡಿ) ವಿಸ್ತೀರ್ಣದ ಸ್ವತ್ತಿನಲ್ಲಿ “ಹೂವು – ಹಣ್ಣುಗಳನ್ನು ಬೆಳೆಯುವ ಸಸಿಗಳನ್ನು ಪೋಷಿಸುವ ನರ್ಸರಿ ಇದ್ದ ಕಾರಣ, ಆ ನರ್ಸರಿ ಮಾಲೀಕರಿಂದ “ನರ್ಸರಿಯನ್ನು ನಡೆಸಿಕೊಂಡು ಹೋಗಲು ಇನ್ನಷ್ಟು ಕಾಲಾವಕಾಶ ನೀಡಿ ಮತ್ತು ಮುಂದೆ ನರ್ಸರಿಯನ್ನು ಮುಚ್ಚುವ ಸಮಯದಲ್ಲಿ CITB ಯ ವಶಕ್ಕೆ ಒಪ್ಪಿಸುತ್ತೇವೆ”ಎಂಬರ್ಥದ ಮುಚ್ಚಳಿಕೆ ಪತ್ರವನ್ನು CITB ಅಧಿಕಾರಿಗಳು ಸದರಿ ಸ್ವತ್ತಿನ ಭೂ ಮಾಲೀಕರಿಂದ ಲಿಖಿತ ರೂಪದಲ್ಲಿ ಬರೆಯಿಸಿಕೊಂಡಿದ್ದರು.
ಅಲ್ಲದೇ ಸದರೀ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ ಭೂ ಮಾಲೀಕರಿಗೆ CITB ವತಿಯಿಂದ “ಭೂ ಸ್ವಾಧೀನ ಪ್ರಕ್ರಿಯೆ”ಗೆ ಸಂಬಂಧಿಸಿದಂತೆ ನ್ಯಾಯಯುತವಾದ ಪರಿಹಾರ ಧನವೂ ಸಹ ಬಿಡುಗಡೆಯಾಗಿತ್ತು. ಈ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ ಜಾಗದಲ್ಲಿದ್ದ ನರ್ಸರಿಯು ಕಳೆದ ಐದು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿತ್ತು. ಈ ರೀತಿ ಸ್ಥಗಿತಗೊಂಡಿದ್ದ ನರ್ಸರಿಯ ಜಾಗವನ್ನು 1948 ರಲ್ಲಿ ಆ ಭೂ ಮಾಲೀಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದ ಪತ್ರದಲ್ಲಿನ ಷರತ್ತಿನಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾನೂನು ರೀತ್ಯಾ ತಮ್ಮ ವಶಕ್ಕೆ ಪಡೆದುಕೊಳ್ಳಬೇಕಿತ್ತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಬಿಲ್ಡರ್ ಒಬ್ಬ ತನ್ನ ಆರ್ಥಿಕ ಪ್ರಭಾವದಿಂದ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯ ಹೊಂದಿರುವ 32,670 ಚ. ಅಡಿಗಳಷ್ಟು ವಿಸ್ತೀರ್ಣದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಅಮೂಲ್ಯ ಸ್ವತ್ತನ್ನು 1948 ರಲ್ಲೇ ತಮ್ಮ ಪಾಲಿನ ಪರಿಹಾರಧನವನ್ನು ಪಡೆದಿದ್ದ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ ಭೂ ಮಾಲೀಕರಿಂದ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸ್ವತ್ತಿಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ 23 ಜನರಿಂದ ದಿನಾಂಕ 02/01/2024 ರಂದು ₹ 23.76 ಕೋಟಿ ಮೊತ್ತವನ್ನು ನಮೂದಿಸಿ, ಹತ್ತಾರು ಲಕ್ಷ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡಿ ಕೋರಮಂಗಲದಲ್ಲಿರುವ ಬೊಮನಹಳ್ಳಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ “Sale Agreement”(ಕ್ರಯದ ಕರಾರು ಪತ್ರ) ಮಾಡಿಸಿಕೊಂಡಿದ್ದಾರೆ !!!
ಅದಾದ ನಂತರ ಇದೀಗ, ಅದೇ ಸ್ವತ್ತನ್ನು ಅಶೋಕ್ ಧಾರಿವಾಲ್ ಎಂಬ ಕುಖ್ಯಾತ ಬಿಲ್ಡರ್ ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ತಮ್ಮ ಹೆಸರಿಗೆ “ಕ್ರಯ ಪತ್ರ”ಮಾಡಿಸಿಕೊಂಡಿದ್ದು, Sale Agreement (ಕ್ರಯದ ಕರಾರು ಪತ್ರ) ದಲ್ಲಿ ಸಹಿ ಹಾಕಿದ್ದ 23 ಜನರ ಪೈಕಿ ‘ಶಾಂತಕುಮಾರ್’ಎಂಬ ವ್ಯಕ್ತಿಯು “ಸಹಿ” ಹಾಕದೇ ಇರುವ ಕಾರಣ, ಈ ನೊಂದಣಿ ಪ್ರಕ್ರಿಯೆಯನ್ನು “Pending Registration” ಎಂದು ಬಾಕಿ ಇಟ್ಟಿರುತ್ತಾರೆ.
₹ 100 ಕೋಟಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ BDA ಸ್ವತ್ತನ್ನು ಅಶೋಕ್ ಧಾರೀವಾಲ್ ಎಂಬ ಸರ್ಕಾರಿ ನೆಲಗಳ್ಳನೊಬ್ಬ ಕಬಳಿಸಲು ಸಹಕಾರ ನೀಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತು BDA ಸ್ವತ್ತು ಎಂಬ ಸತ್ಯ ತಿಳಿದಿದ್ದರೂ ಸಹ ಹತ್ತಾರು ಲಕ್ಷ ಲಂಚ ಪಡೆದು, ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೂ ಸಹ ಕಾನೂನುಬಾಹಿರವಾಗಿ ನೋಂದಣಿ ಮಾಡಿಕೊಟ್ಟಿರುವ ಬೊಮ್ಮನಹಳ್ಳಿ ಉಪ ನೊಂದಣಾಧಿಕಾರಿ ಮತ್ತು ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳ ವಿರುದ್ಧ ಹಾಗೂ ಬಿಲ್ಡರ್ ವಿರುದ್ಧ ಕಾನೂನು ರೀತ್ಯಾ ಪ್ರಕರಣಗಳನ್ನು ದಾಖಲಿಸುವ ಸಂಬಂಧ ಸೂಕ್ತ ಕ್ರಮ ವಹಿಸಬೇಕೆಂದು ಮತ್ತು ಕೂಡಲೇ ಈ ಅತ್ಯಮೂಲ್ಯ ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳುವ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಹಾಗೆಯೇ ಬೊಮ್ಮನಹಳ್ಳಿ ಉಪ ನೊಂದಣಾಧಿಕಾರಿ ಮತ್ತು ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳ ವಿರುದ್ಧ ಹಾಗೂ ಅಶೋಕ್ ಧಾರಿವಾಲ್ ಎಂಬ ಕುಖ್ಯಾತ ಬಿಲ್ಡರ್ ವಿರುದ್ಧ ಕಾನೂನು ರೀತ್ಯಾ ಪ್ರಕರಣಗಳನ್ನು ದಾಖಲಿಸುವ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ಮತ್ತು ಕೂಡಲೇ ಈ ಅತ್ಯಮೂಲ್ಯ ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶಕ್ಕೆ ವಹಿಸಿಕೊಡುವ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯದ ಕಂದಾಯ ಸಚಿವರಿಗೂ ಒತ್ತಾಯಿಸಿದ್ದಾರೆ.