ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಶ್ಚಿಮ ವಲಯದ ಕೆ.ಆರ್.ಮಾರುಕಟ್ಟೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಿದೆ. ಆದರೆ, ವ್ಯಾಪಾರಸ್ಥರು ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳದೆ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರಿಂದ ಸಮಸ್ಯೆ ಆಗುತ್ತಿದೆ. ಆದ್ದರಿಂದ ತ್ಯಾಜ್ಯ ಬಿಸಾಡುವಂತಹ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರು 70 ಟನ್ ತ್ಯಾಜ್ಯ ಉತ್ಪತ್ತಿಯಾಗಲಿದ್ದು, ಅದನ್ನು ಮೂರು ಪಾಳಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ಬಳಿಕ ನಿರಂತರವಾಗಿ ಮೇಲ್ವಿಚಾರಣೆ ಮಾಡಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ತಿಳಿಸಿದರು.
ವ್ಯಾಪಾರಿಗಳಿಗೆ ಮಾರ್ಕಿಂಗ್ ಮಾಡಿ: ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಾರ್ಕಿಂಗ್ ಮಾಡಿ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಾರ್ಕಿಂಗ್ ಸ್ಥಳ ಬಿಟ್ಟು ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಮಾರುಕಟ್ಟೆ ಹೊರ ಭಾಗದಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವುದನ್ನು ನಿಯಂತ್ರಿಸಿ ಎಂದು ಹೇಳಿದರು.
ಹೆಚ್ಚುವರಿ ಮಾರ್ಷಲ್ ಗಳ ನಿಯೋಜನೆಗೆ ಕ್ರಮ: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಒಬ್ಬ ಮಾರ್ಷಲ್ ಮೇಲ್ವಿಚಾರಕರನ್ನು ನಿಯೋಜಿದ್ದು, 7 ಮಾರ್ಷಲ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾರ್ಷಲ್‌ಗಳ ಅವಶ್ಯಕತೆಯಿದ್ದಲ್ಲಿ ಪಡೆಯಲು ಸೂಚಿಸಿದರು. ಜೊತೆಗೆ ಸ್ವಚ್ಚಗೊಳಿಸುವ ಪೌರಕಾರ್ಮಿಕರಿಗೆ ಪುಷ್ ಕಾರ್ಟ್ ಗಳ ವ್ಯವಸ್ಥೆ ಮಾಡಲು ಸೂಚಿಸಿದರು.
ತ್ಯಾಜ್ಯ ಬಿನ್ ಗಳ ವ್ಯವಸ್ಥೆ ಮಾಡಿ: ವ್ಯಾಪಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ತಪ್ಪಿಸಲು ಪ್ರಮುಖ 4 ಸ್ಥಳಗಳಲ್ಲಿ ತ್ಯಾಜ್ಯ ಬಿನ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಎಲ್ಲಾ ವಾಪಾರಿಗಳಿಗೆ ಪ್ರತ್ಯೇಕವಾಗಿ ಬಿನ್ ಗಳನ್ನು ಇಟ್ಟುಕೊಂಡು ಅದರಲ್ಲಿಯೇ ತ್ಯಾಜ್ಯ ಹಾಕಿ, ಪಾಲಿಕೆ ನಿಗದಿಪಡಿಸಿರುವ ಸ್ಥಳದಲ್ಲಿ ತಂದು ಸುರಿಯಲು ಸೂಚನೆ ನೀಡಲು ತಿಳಿಸಿದರು.

ಪ್ರೆಶರ್ ವಾಷರ್ ಮೂಲಕ ಸ್ವಚ್ಛತೆ ಮಾಡಿ: ಕೆ.ಆರ್. ಮಾರುಕಟ್ಟೆಯಲ್ಲಿ ಹೆಚ್ಚು ಅಶುಚಿತ್ವ ಇರುವ ಸ್ಥಳಗಳಲ್ಲಿ ಪ್ರೆಶರ್ ವಾಷರ್ ಬಳಸಿ ಸ್ವಚ್ಛತೆ ಮಾಡಬೇಕು. ಅದಕ್ಕಾಗಿ ಈಗಾಗಲೇ 5 ಹೆಚ್.ಪಿ. ಸಾಮರ್ಥ್ಯದ ಪ್ರೆಶರ್ ವಾಷರ್ ಖರೀದಿಸಿದ್ದು, ಅದರ ಮೂಲಕ ಪ್ರತಿನಿತ್ಯ ಸ್ವಚ್ಚತೆ ಇಲ್ಲದ ಕಡೆ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಹೊಸದಾಗಿ ಪಾರ್ಕಿಂಗ್ ಟೆಂಡರ್: ಕೆ.ಆರ್. ಮಾರುಕಟ್ಟೆಯ ನೆಲ ಮಹಡಿ ಹಾಗೂ ಇತರೆ ಜಾಗಗಳಲ್ಲಿ ಹೊಸದಾಗಿ ಪಾರ್ಕಿಂಗ್ ಟೆಂಡರ್ ಕರೆದು, ಒಳಗೆ ಹಾಗೂ ಹೊರಗೆ ಹೋಗುವ ಮಾರ್ಗಗಳನ್ನು ಸರಿಯಾಗಿ ನಿಗದಿಡಿಸಿಕೊಳ್ಳಬೇಕು. ಈ ಸಂಬಂಧ ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಪಾರ್ಕಿಂಗ್ ದರ ನಿಗದಿಪಡಿಸಲು ಸೂಚಿಸಿದರು.
ಈ ವೇಳೆ ಜಂಟಿ ಆಯುಕ್ತ ಸಂಗಪ್ಪ, ಕಾರ್ಯಪಾಲಕ ಅಭಿಯಂತರರು, ಜಲಮಂಡಳಿ ಅಧಿಕಾರಿಗಳು, ಮಾರ್ಷಲ್‌ಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Related
