ಮಂಡ್ಯ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ನವವಿವಾಹಿತನಿಗೆ ಪತ್ನಿಯ ತಂದೆ ಸೇರಿ 9ಮಂದಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರದಲ್ಲಿ ನಡೆದಿದ್ದು, ಘಟನೆಯ ನಂತರ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ವೇಳೆ ದಂಪತಿ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ಕೃತ್ಯೆಸಗಿದ್ದು ನವವಿವಾಹಿತ ಮಡಿವಾಳ ಸಮುದಾಯದ ಶಶಾಂಕ್ (22) ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇತ್ತೀಚೆಗೆ ಕುರುಬ ಸಮುದಾಯದ 19 ವರ್ಷದ ಯುವತಿಯನ್ನು ಶಶಾಂಕ್ ಮದುವೆಯಾಗಿದ್ದ. ಈ ಮದುವೆಗೆ ಆಕೆಯ ಕುಟುಂಬದವರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ತಮ್ಮ ಒಪ್ಪಿಗೆಗೆ ವಿರುದ್ಧವಾಗಿ ಮದುವೆಯಾದ ಕಾರಣ ಆಕೆಯ ತಂದೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಮೈಸೂರಿನ ಯುವತಿಯ ತಂದೆ ಜೆ.ಪಿ.ಆನಂದ್ ಸೇರಿದಂತೆ 9ಮಂದಿ ದುಷ್ಕರ್ಮಿಗಳು ಶಶಾಂಕ್‌ನನ್ನು ಎದುರಿಸಿ ಚಾಕುವಿನಿಂದ ಅಮಾನುಷವಾಗಿ ಇರಿದಿದ್ದಾರೆ. ಹಲ್ಲೆಯಿಂದ ಆತನ ಕರುಳಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಶಶಾಂಕ್ ಬೇರೆ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಯುವತಿಯ ಮನೆಯವರು ಆತನ ಸಂಬಂಧವನ್ನು ವಿರೋಧಿಸುತ್ತಿದ್ದರು ಎಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎನ್.ಕುಮಾರ್ ಹೇಳಿದ್ದಾರೆ.
ಯುವತಿಯ ಕುಟುಂಬ ತಮ್ಮದೇ ಜಾತಿಯ ವರನನ್ನು ಆಯ್ಕೆ ಮಾಡಿ ಆಕೆಗೆ ಮದುವೆ ಮಾಡಲು ಹೊರಟಿತ್ತು. ಆಕೆಯ ಇಚ್ಛೆಗೆ ವಿರುದ್ಧವಾಗಿ ನಿಶ್ಚಿತಾರ್ಥದ ಸಮಾರಂಭವನ್ನು ಸಹ ನಡೆಸಿತು. ಆದರೆ ಮಾರ್ಚ್ 6 ರಂದು ಆಕೆ ಓಡಿಹೋಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಶಶಾಂಕ್ ಎಂಬಾತನನ್ನು ವರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದ ನಂತರ, ಯುವತಿಯ ತಂದೆ ಮಗಳನ್ನು ಭೇಟಿ ಮಾಡಿ ತನ್ನ ಮನೆಗೆ ಕರೆದಿದ್ದಾರೆ. ಆದರೆ ಆಕೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ತಂದೆ ನಂತರ ಹುಡುಗನನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ್ದಾರೆ. ಆದರೆ, ಅವರ ದಾಳಿಯಿಂದ ಬಚಾವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಾವು ಎಲ್ಲ ಆರೋಪಿಗಳ ವಿರುದ್ಧ IPC ಸೆಕ್ಷನ್ 141 (ಕಾನೂನುಬಾಹಿರ ಸಭೆ), 149 , 325 (ಗಂಭೀರ ನೋವುಂಟುಮಾಡುವುದು), ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಅವರನ್ನು ಬಂಧಿಸಿ ಶ್ರೀರಂಗಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.