ಇಂದಿನಿಂದ ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತು ಹಾಕಿದ್ದೇನೆ ಅಂತ ಅನಾಮಿಕ ಕೊಟ್ಟ ದೂರಿನ ತನಿಖೆ ಚುರುಕು

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ತನಿಖೆಯನ್ನು SIT ಇಂದಿನಿಂದ ನಡೆಸಲಿದ್ದು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಶುಕ್ರವಾರ ಮಂಗಳೂರು ತಲುಪಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದೆ.
ಸದ್ಯ ಬೆಳ್ತಂಗಡಿಯಲ್ಲಿ ಕಚೇರಿ ತೆರದಿರೋ ಎಸ್‌ಐಟಿ ಇಂದೇ ತನಿಖೆಗೆ ಇಳಿಯಲಿದೆ. ಹೀಗಾಗಿ ಶುಕ್ರವಾರ ತಡರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿ, ಕೇಸ್ ಫೈಲ್ ಪಡೆದ್ದಾರೆ.
ಕಳೆದ ಜುಲೈ 3 ರಂದು ದೂರುದಾರನ ಪರವಾಗಿ ವಕೀಲರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆತನ ಹಸ್ತಾಕ್ಷರದ ಪ್ರತಿಯನ್ನು ಸಲ್ಲಿಸಿದ್ದರು. ಮಾರನೇ ದಿನ ಎಫ್‌ಐಆರ್ ದಾಖಲಾಗಿದ್ದು, ಸ್ಥಳ ಮಹಜರು ನಡೆಸಿ ದೂರುದಾರನ ಸಮ್ಮುಖದಲ್ಲಿ ಶವಗಳನ್ನು ಅಗೆದು ತೆಗೆಯಲು ಪೊಲೀಸರು ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ಪ್ರಕರಣ ತನಿಖೆಯನ್ನು ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ನಾಲ್ಕು ಐಪಿಎಸ್ ಅಧಿಕಾರಿಗಳ ಸಹಿತ ಒಟ್ಟು 20 ಮಂದಿಯ ಎಸ್‌ಐಟಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ತಂಡ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದೆ.
ಇನ್ನು ಡಿಐಜಿ ಅನುಚೇತ್ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ತಡರಾತ್ರಿ ಧರ್ಮಸ್ಥಳ ಠಾಣೆಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಆಗಮಿಸಿ ಕೇಸ್ ಫೈಲ್ ಪಡೆದಿದ್ದಾರೆ. ಅಲ್ಲದೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಪ್ರಕರಣದ ಈವರೆಗಿನ ತನಿಖಾಧಿಕಾರಿ ಸಮರ್ಥ್ ಗಾಣಿಗೇರ್ ಅವರಿಂದಲೂ ಮಾಹಿತಿ ಕಲೆಹಾಕಿದ್ದಾರೆ.
ಇಡೀ ಪ್ರಕರಣದ ತನಿಖೆಯನ್ನು ಎಸ್‌ಐಟಿ ಇಂದಿನಿಂದಲೇ ಆರಂಭಿಸಲಿದೆ. ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿದ್ದು, ತನಿಖೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಪ್ರಕರಣದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿದ ಅಧಿಕಾರಿಗಳು, ತನಿಖೆಗೆ ಧರ್ಮಸ್ಥಳಕ್ಕೂ ಆಗಮಿಸಲಿದ್ದಾರೆ. ತನಿಖೆ ಒಂದು ಹಂತಕ್ಕೆ ಬಂದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನ ಶವ ಹೂತಿಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆತನ ಸಮ್ಮುಖದಲ್ಲೇ ಮಣ್ಣು ಅಗೆದು ಶವಗಳನ್ನು ಹೊರ ತೆಗೆಯೋ ಪ್ರಕ್ರಿಯೆ ನಡೆಯಲಿದೆ.

ಇನ್ನು ಆತನ ದೂರಿನಂತೆ ಸುಮಾರು 20 ವರ್ಷಗಳ ಹಿಂದೆ ಶವಗಳನ್ನು ಹೂತಿಟ್ಟಿರೋದು ನಿಜವಾಗಿದ್ದರೆ ಅದರ ಅಸ್ತಿಪಂಜರಗಳು ಸಿಗೋ ಸಾಧ್ಯತೆ ಇದೆ. ಆ ಬಳಿಕ ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರೋದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ ಎಂದು ಕ್ಷೇತ್ರದ ವಕ್ತಾರ ಕೆ.ಪಾರ್ಶ್ವನಾಥ್ ಜೈನ್ ಅದೇ ದಿನ ಮಾಧ್ಯಮ ಪ್ರಕಟಣೆ ನೀಡಿದ್ದರು.
Related
