ಬಸ್ ಹೊರಡುವ ಮುನ್ನ ಗಗನಸಖಿಯರಂತೆ ಕಂಡಕ್ಟರ್-ಚಾಲಕರು ಪ್ರಯಾಣಿಕರಿಗೆ ಸುರಕ್ಷತಾ ಮಾಹಿತಿ ನೀಡುವುದು ಕಡ್ಡಾಯ

ಬೆಂಗಳೂರು: 2025ರ ಡಿಸೆಂಬರ್ 25 ರಂದು ತಡರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಬಸ್ಗಳಿಗೆ ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ಖಡಕ್ ಸೂಚನೆ ನೀಡಿದೆ.

ಅದರಲ್ಲಿ ಪ್ರಮುಖವಾಗಿ ವಿಮಾನದಲ್ಲಿ ಟೇಕಪ್ಗೂ ಮುನ್ನ ಗಗನಸಖ-ಸಖಿಯರು ನೀಡುವ ಸಂದೇಶದಂತೆ, ಖಾಸಗಿ ಬಸ್ಗಳಲ್ಲೂ ಸಂದೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ವಿಮಾನದಲ್ಲಿ ಟೇಕಪ್ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ಎಮರ್ಜನ್ಸಿ ದ್ವಾರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ತುರ್ತು ನಿರ್ಗಮನದ ಮೂಲಕ ಹೇಗೆ ನಿರ್ಗಮಿಸಬೇಕೆಂದು ತಿಳಿಸುತ್ತಾರೆ.
ಆದೇ ರೀತಿಯಲ್ಲಿ ಬಸ್ ಪ್ರಯಾಣಿಕರಿಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಅಂದರೆ, ಖಾಸಗಿ ಬಸ್ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಸ್ ಹೊರಡುವ ಮುನ್ನ ಪ್ರಯಾಣಿಕರಿಗೆ ಕಂಡಕ್ಟರ್ ಅಥವಾ ಚಾಲಕರಿಂದ ಸುರಕ್ಷತಾ ಮಾಹಿತಿ ನೀಡುವುದು ಕಡ್ಡಾಯ. ತುರ್ತು ನಿರ್ಗಮನ ದ್ವಾರಗಳು ಎಲ್ಲೆಲ್ಲಿವೆ, ಎಮೆರ್ಜನ್ಸಿ ವಿಂಡೋಗಳು ಎಲ್ಲಿವೆ, ಹೇಗೆ ಗಾಜಿನ ಕಿಟಕಿಯನ್ನು ಒಡೆದು ಪಾರಾಗಬೇಕು ಎಂಬ ಎಲ್ಲ ಮಾಹಿತಿಯನ್ನು ಪ್ರತಿ ಪ್ರಯಾಣಿಕನಿಗೆ ನೀಡಬೇಕು. ಎಮೆರ್ಜನ್ಸಿ ವಿಂಡೋಗಳಿರುವ ಸೀಟ್ಗಳನ್ನು ಯುವಕರು ಅಥವಾ ಮಧ್ಯವಯಸ್ಕರರಿಗೆ ನೀಡಬೇಕೆಂದು ಸಲಹೆ ನೀಡಿದೆ.
ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಮಾಹಿತಿಗಳನ್ನು ಬಸ್ ಹೊರಡುವ ಮುನ್ನ ನೀಡುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಬಸ್ ಮಾಲೀಕರಿಗೆ ತಿಳಿಸಿದೆ. ಹೀಗೆ ಮಾಹಿತಿ ನೀಡುವುದರಿಂದ ಅವಘಡಗಳು ಸಂಭವಿಸಿದಾಗ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಇಲಾಖೆಯ ಅಭಿಪ್ರಾಯ.
ಸಾರಿಗೆ ಇಲಾಖೆಯ ಅಧಿಕಾರಿಗಳ ಸೂಚನೆಗಳನ್ನು ಸ್ವಾಗತಿಸುತ್ತೇವೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿದ್ದು ನಮಗೂ ಪ್ರಯಾಣಿಕರ ಸುರಕ್ಷತೆ ಮುಖ್ಯ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಚಿತ್ರದುರ್ಗದ ಘಟನೆಯಿಂದ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಕೆಲವು ನಿಯಮಗಳನ್ನು ಅನುಸರಿಸಲು ಖಾಸಗಿ ಬಸ್ಗಳ ಮಾಲೀಕರಿಗೆ ಸೂಚನೆ ನೀಡಿದೆ. ಆದರೆ, ಇದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.
Related









