ಬನ್ನೂರು: ಮೋಜಿನ ಕ್ರಿಕೆಟ್‌ಗೆ ಪ್ರಶಸ್ತಿ ಕೊಡುವ ಸರ್ಕಾರಗಳಿಗೆ ಪರಿಸರದ ಬಗ್ಗೆ ಗಂಭೀರವಾದ ಕಾಳಜಿ ಇಲ್ಲದೇ ಇರುವುದೇ ದೌರ್ಭಾಗ್ಯ ಎಂದು ರೈತರತ್ನ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಬನ್ನೂರು ಪಟ್ಟಣದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಘಟಕದ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪರಿಸರ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆ ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ ಎಂಬುದನ್ನು ಮರೆತಿದ್ದಾರೆ. ಗೋಮಾಳ, ಕೆರೆಕಟ್ಟೆಗಳು, ಮೀಸಲು ಅರಣ್ಯಗಳು, ಬಲಾಢ್ಯರ ಪಾಲಾಗುತ್ತಿದೆ, ಪರಿಸರಕ್ಕೆ ಧಕ್ಕೆಯಾಗುತ್ತಿದೆ ಸರ್ವೋಚ್ಚ ನ್ಯಾಯಾಲಯದ ಕಠಿಣ ಸೂಚನೆ ಇದ್ದರೂ ಪರಿಸರ ರಕ್ಷಣೆ ಮಾಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಇದು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಪರಿಸರ ಸಂಪತ್ತು ಏರಿಕೆಯಾಗುತ್ತಿಲ್ಲ ಆದ್ದರಿಂದಲೇ ಹವಮಾನ ವೈಪರಿತ್ಯವಾಗುತ್ತಿದೆ. ಕೃಷಿ ಕ್ಷೇತ್ರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರೈತರು ಜಾಗೃತರಾಗಿ ಪರಿಸರದ ಉಳಿವಿಗಾಗಿ ಮರ ಗಿಡ ಬೆಳೆಸಿ ಮುಂದಿನ ತಲೆಮಾರಿಗೆ ಒಳ್ಳೆಯ ಸಂದೇಶ ನೀಡಿ ಹೋಗಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಬನ್ನೂರ್ ರಾಜು ಮಾತನಾಡಿ, ಪರಿಸರ ಉಳಿದಿರುವುದು ರೈತರಿಂದಲೇ ರೈತರೇ ಅದನ್ನು ಮತ್ತಷ್ಟು ಸಂರಕ್ಷಿಸಲು ಚಿಂತಿಸಬೇಕು. ಸರ್ವ ರೋಗಕ್ಕೂ ಪರಿಸರವೇ ಮದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಸಾಗುತ್ತಾ ಎಲ್ಲವನ್ನು ಮರೆಯುತ್ತಿದ್ದೇವೆ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.
ತಾಲೂಕು ಸಾಮಾಜಿಕ ವಲಯ ಅರಣ್ಯ ಉಪ ಅರಣ್ಯ ಅಧಿಕಾರಿ ಆಂತೋನಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸರ್ಕಾರಿ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಹೆಚ್ಚು ಅಂಕ ಪಡೆದ 15 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ರೈತರಿಗೂ ಉಚಿತವಾಗಿ ಸಸಿ ವಿತರಣೆ ಮಾಡ ಮಾಡಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಕಾರ್ಯಕ್ರಮ ನಿರೂಪಿಸಿದರೆ, ಕಿರಗಸೂರು ಶಂಕರ್ ಸ್ವಾಗತಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಗೂಳಿಗೌಡ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರವೀಶ್, ಅತ್ತಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಚಿನ್ನಸ್ವಾಮಿ, ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ತಿಬ್ಬೆಗೌಡ, ಬನ್ನೂರು ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಕುಮಾರ್, ಬನ್ನೂರು ಗ್ರಾಮಾಂತರ ಘಟಕದ ರೈತ ಮುಖಂಡರಾದ ಸಿನಿಂಗಣ್ಣ, ಬನ್ನೂರು ಸೂರಿ, ಅರುಣ್ ಕುಮಾರ್, ಕುಂತನಹಳ್ಳಿ ಸ್ವಾಮಿ, ನವೀನ ಪಿ, ಶಿವರಾಜ್, ಕುಳ್ಳೇಗೌಡ, ರೇವಣ್ಣ, ಮೆಡಿಕಲ್ ಮಹೇಶ್, ರಾಮಲಿಂಗೇಗೌಡ, ಹನುಮನಾಳು ಲೋಕೇಶ್, ಜಗದೀಶ್ ಮುಂತಾದವರು ಇದ್ದರು.