NEWSನಮ್ಮಜಿಲ್ಲೆರಾಜಕೀಯ

ಗಂಗಾವತಿ: ಪತಿ ಶಾಸಕ ಸ್ಥಾನದಿಂದ ಅನರ್ಹವಾದ ಬೆನ್ನಲ್ಲೇ ಜನಾರ್ದನ ರೆಡ್ಡಿ ಪತ್ನಿಯಿಂದ ಕಾರ್ಯಕರ್ತರ ಸಭೆ

ವಿಜಯಪಥ ಸಮಗ್ರ ಸುದ್ದಿ

ಗಂಗಾವತಿ: ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ಕೋರ್ಟ್‌ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದರಿಂದ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಬೆನ್ನಲ್ಲೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಶಾಸಕ ಸ್ಥಾನದಿಂದ ಅನರ್ಹವಾದ ಸುದ್ದಿ ಪ್ರಕಟವಾಗುತ್ತಿದ್ದಂತೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಳಯದಲ್ಲಿ ಭಾರೀ ವಿದ್ಯಮಾನಗಳು ನಡೆದಿವೆ. ಇದರ ನಡುವೆ ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಗಳ ಬಳಗದಿಂದ ಇಂದು ಶ್ರೀಚೆನ್ನಬಸವ ತಾತ ಕಲಾಮಂದಿರದಲ್ಲಿ ವಿಶೇಷ ಸಭೆ ನಡೆಯಿತು.

ಈ ಸಭೆಯನ್ನು ಅವರ ಪತ್ನಿ ಅರುಣಾ ನಡೆಸಿದರು. ರೆಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದರೂ ಅವರಿಗೆ ಜನಬೆಂಬಲ ಈಗಲೂ ಇದೆ ಅನ್ನೋದಕ್ಕೆ ಇಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರೇ ಸಾಕ್ಷಿ. ಬಹಳಷ್ಟ್ಟು ಜನ ಮಾತಾಡಿ ಅರುಣಾ ಅವರಿಗೆ ಬೆಂಬಲ ಸೂಚಿಸಿದರು ತಮ್ಮ ಯಾವ ಕಾರಣಕ್ಕೂ ರೆಡ್ಡಿಯವರಿಂದ ವಿಮುಖರಾಗುವುದಿಲ್ಲ ಎಂದು ಹೇಳಿದರು.

ಇತ್ತ ಜಾಮೀನಿಗಾಗಿ ವಿಶೇಷ ಪೂಜೆ: ಗಣಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಅವರಿಗೆ ಶೀಘ್ರ ಜಾಮೀನು ಸಿಗಲೆಂದು ಪ್ರಾರ್ಥಿಸಿ ಸಭೆಗೂ ಮುನ್ನಾ ಬೆಳಗ್ಗೆ ಕರ್ನೂಲನ ತಾತಾ ದರ್ಗಾ ಮತ್ತು ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅರುಣಾ ಸ್ಪರ್ಧಿಸುವರೇ?: ಒಂದು ವೇಳೆ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧಿಸುವ ಚಿಂತನೆ ನಡೆದಿದೆ. 2023ರಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಅವರು ಇಲ್ಲಿ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ.

ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಈಗ ಲಕ್ಷ್ಮೀ ಅರುಣಾ ಅಖಾಡಕ್ಕೆ ಬಂದಿದ್ದರಿಂದ ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕಾದುನೋಡಬೇಕಿದೆ.

ಶಾಸಕರಾಗಿ 2 ವರ್ಷ ಪೂರ್ಣಗೊಳ್ಳುತ್ತಿದ್ದರೂ ಸಹ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಇನ್ನೂ ಆಗಬೇಕಾಗಿದೆ. ಪತಿಯ ಕನಸು ನನಸು ಮಾಡಬೇಕೆಂಬ ಛಲ ತೊಟ್ಟಿರುವ ಅರುಣಾ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಇಂದು ನಡೆದ ಸಭೆಯಲ್ಲಿ ನೂರಾರು ಅಭಿಮಾನಿಗಳ ಭಾಗವಹಿಸಿ ಬೆಂಬಲ ಸೂಚಿಸುವ ಸುಳಿವು ನೀಡಿದರು ಎನ್ನಲಾಗುತ್ತಿದೆ.

ಕಾಂಗ್ರೆಸ್ಸಿನಲ್ಲೂ ಪೈಪೋಟಿ: ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲೇ ಇದೀಗ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸುತ್ತಿರುವ ಆಕಾಂಕ್ಷಿಗಳು, ಚುನಾವಣೆ ಘೋಷಣೆ ಆದ ತಕ್ಷಣ ತಮ್ಮ ಬೆಂಬಲಿಗರ ಮೂಲಕ ವರಿಷ್ಠರಿಗೆ ಟಿಕೆಟ್‌ಗಾಗಿ ಮನವಿ ಸಲ್ಲಿಸುವ ಸಾಲಿನಲ್ಲಿ ನಿಲ್ಲಲಿದ್ದಾರೆ.

Megha
the authorMegha

Leave a Reply

error: Content is protected !!