KKRTC ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಆರೋಪಿಗೆ 2 ತಿಂಗಳು ಜೈಲು, 4500 ರೂ.ದಂಡ ವಿಧಿಸಿ ತೀರ್ಪು ನೀಡಿದ JMFC ನ್ಯಾಯಾಲಯ

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ಸಿರುಗುಪ್ಪ ಘಟಕದ ಬಸ್ ನಿರ್ವಾಹಕರ ಕೆಲಸಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ ಹಲ್ಲೆ ಮಾಡಿದ್ದ ಆರೋಪಿಗೆ 2 ತಿಂಗಳ ಸಾದ ಜೈಲು ಶಿಕ್ಷೆ ಹಾಗೂ 4,500 ರೂ. ದಂಡ ವಿಧಿಸಿ ಲಿಂಗಸುಗೂರು ಸಿಜೆ (ಹಿವಿ) ಮತ್ತು ಜೆಎಮ್ಎಫ್‌ಸಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಕಳೆದ 2022ರ ಮಾರ್ಚ್ 7ರಂದು ಕಸಬಾಲಿಂಗಸುಗೂರು ನಿವಾಸಿ ಅಪರಾಧಿ ಬಸವರಾಜ ಕಸಬಾಲಿಂಗಸಗೂರು ಬಸ್ ನಿಲ್ದಾಣ ಬಸ್ ಇಳಿಯದೆ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದನ್ನು. ಹಲ್ಲೆ ಸಂಬಂಧ CC 140/2023 (ಲಿಂಗಸಗೂರು ಪೊಲೀಸ್ ಠಾಣೆ ಗುನ್ನೆ ನಂ. 39/2022 )ರಡಿ 07-03-2022 ರಂದು ಪ್ರಕರಣ ದಾಖಲಾಗಿತ್ತು.
ಬಸ್ ಲಿಂಗಸುಗೂರಿನಿಂದ ಬಳ್ಳಾರಿ ಮಾರ್ಗ ಸಂಖ್ಯೆ 58/59 ರ ಮಾರ್ಗದಲ್ಲಿ ಸಿರುಗುಪ್ಪ ಘಟಕದ ಬಸ್ ನಂ. ಕೆಎ-34 ಎಫ್-1275 ಲಿಂಗಸುಗೂರಿನಿಂದ ಬಳ್ಳಾರಿ ಮಾರ್ಗವಾಗಿ ಕಸಬಾಲಿಂಗಸುಗೂರು ಹತ್ತಿರ ಅಂದು ಅಂದರೆ 2022ರ ಮಾರ್ಚ್ 7ರಂದು ಬೆಳಗ್ಗೆ 11.45 ಗಂಟೆಗೆ ಬರುತ್ತಿದ್ದಂತೆ ನಿರ್ವಾಹಕರು ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡಿದ್ದಾರೆ.
ಈ ವೇಳೆ ಆರೋಪಿತ ಬಸವರಾಜ ಏಕಾಏಕಿ ನಿರ್ವಾಹಕನಿಗೆ ನನಗೆ ಇಳಿ ಅಂತಾ ಹೇಳಲು ನೀನು ಯಾವನಲೇ ಸೂ* ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು ಸರ್ಕಾರಿ ಕೆಲಸಕ್ಕೆ ಅಡ್ಡಿಮಾಡಿ ನಿರ್ವಾಹಕರಿಗೆ ಬಸ್ಸಿನ ಕೆಳಗೆ ಇಳಿದು ಬಂದು ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಮಾಡಿದ್ದ.
ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಂದಿನ ತನಿಖಾಧಿಕಾರಿಯಾಗಿದ್ದ ರತ್ನವ್ವ ತೋಟದ್ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಲಿಂಗಸುಗೂರಿನ ಸಿಜೆ (ಹಿವಿ) ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶರಾದ ಹುಂಡಿ ಮಂಜುಳಾ ಅವರು ಅ.27ರ ಸೋಮವಾರ ಆರೋಪಿಗೆ 2 ತಿಂಗಳ ಸಾದ ಕಾರಾಗೃಹ ಶಿಕ್ಷೆ ಹಾಗೂ 4,500 ರೂ. ದಂಡ ವಿಧಿಸಿ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿರುಪಣ್ಣ ದುಮತಿ ಲಿಂಗಸುಗೂರು ಅವರು ವಾದ ಮಾಡಿದ್ದರು. ಲಿಂಗಸುಗೂರು ಪೊಲೀಸ್ ಸಿಬ್ಬಂದಿಗಳಾದ ಬಸವರಾಜ, ಅಮರೇಶ ಮತ್ತು ಶ್ರೀಮತಿ ಮಪಿಸಿ ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.

Related








