NEWSನಮ್ಮಜಿಲ್ಲೆನಮ್ಮರಾಜ್ಯ

ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌ ಪಡೆದ ಜಂಟಿ ಕ್ರಿಯಾ ಸಮಿತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌ ಪಡೆಯಲು ಕೆಎಸ್‌ಆರ್‌ಟಿಸಿ (KSRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಸಮಿತಿ ಪರ ವಕೀಲರು ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ಇಂದು ಹೈಕೋರ್ಟ್‌ನ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ ಜೋಷಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಸರ್ಕಾರಿ ಪರ ವಕೀಲರಾಗಿ ಎ.ಜಿ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ನಿನ್ನೆ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಂಘಟನೆಯೊಂದಿಗೆ ಸಭೆ ಮಾಡಲಾಗಿದೆ. ನಿನ್ನೆ ರಾತ್ರಿಯಷ್ಟೇ ನೋಟಿಸ್ ಸಿಕ್ಕಿದೆ. ರಾಜಿ ಸಂಧಾನಕ್ಕೆ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದ್ರು, ಇದಕ್ಕೆ ಮಾತುಕತೆ ಏನಾಗಿದೆ? ಎಂದು ಹೈಕೋರ್ಟ್ ಪ್ರಶ್ನಿಸಿತು. ಅದಕ್ಕೆ ಎಜಿ, ಈವರೆಗೆ ಸರ್ಕಾರ ನಡೆಸಿದ ಮಾತುಕತೆಗಳ ವಿವರ ನೀಡಿದರು. ಮುಂದುವರಿದು… ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆಯಂತೆ ಸಂಧಾನ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಸಾರಿಗೆ ಸಂಘಟನೆಗಳ ಪರ ವಕೀಲರನ್ನ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಷಿ ನೇತೃತ್ವದ ಪೀಠ ನ್ಯಾಯಾಂಗ ನಿಂದನೆಯ ಎಚ್ಚರಿಕೆಯನ್ನೂ ನೀಡಿತು. ಎಸ್ಮಾ (ಅಗತ್ಯ ಸೇವೆ ನಿರ್ವಹಣೆ ಕಾಯಿದೆ, 1968) ಜಾರಿಯಾಗಿದೆ. ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಅಲ್ಲದೆ ಸಾರಿಗೆ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು. ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಕೋರ್ಟ್‌ ಸಹಿಸಲ್ಲ ಎಂದು ಎಚ್ಚರಿಸಿತು.

ಮುಷ್ಕರ ನಿರ್ಧಾರ ಕಾನೂನು ಬಾಹಿರವಾಗಿದೆ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು. ನಾಳೆ ಮುಷ್ಕರ ನಿಂತಿದೆ ಎಂಬುದನ್ನು ಕೋರ್ಟ್‌ಗೆ ಹೇಳಬೇಕು ಎಂದು ತಾಕೀತು ಮಾಡಿತು. ಇದಕ್ಕೆ ಉತ್ತರಿಸಿದ ನೌಕರರ ಸಂಘಟನೆ ಪರ ವಕೀಲರು, ನಾಳೆ ಮುಷ್ಕರ ನಡೆಸುವುದಿಲ್ಲ ಎಂದು ಹೇಳಿದರು. ಬಳಿಕ ಕೋರ್ಟ್‌ ವಿಚಾರಣೆಯನ್ನ ಆಗಸ್ಟ್‌ 7ಕ್ಕೆ ಮುಂದೂಡಿತು.

ಬೇಡಿಕೆಗೆ ಬಗ್ಗದ ಸರ್ಕಾರ: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ.

ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಬೆನ್ನಲ್ಲೇ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದ್ರೆ ಕೋರ್ಟ್‌ ಆದೇಶ ಪ್ರತಿ ಕೈಸೇರಿಲ್ಲ ಅಂತ ಹೇಳಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಧುಮುಕಿತ್ತು.

Megha
the authorMegha

Leave a Reply

error: Content is protected !!