ಬೆಂಗಳೂರು: ಸಾರಿಗೆ ನೌಕರರಿಗೆ 2020ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಸಂಬಂಧ ಆ.10ರ ಗುರುವಾರ ಕೆರೆದಿದ್ದ ನೌಕರರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿಯ ಯಾವೊಬ್ಬ ಪದಾಧಿಕಾರಿಯೂ ಭಾಗವಹಿಸಿಲ್ಲ.
ಜಂಟಿ ಕ್ರಿಯಾ ಸಮಿತಿಯ ಪ್ರಮುಖರೊಬ್ಬರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಬೇರೊಂದು ದಿನ ಸಭೆಯನ್ನು ನಿಗದಿ ಮಾಡಿ, ನಾವು ಈ ಸಭೆಗೆ ಬರುವುದಕ್ಕೆ ಆಗುತ್ತಿಲ್ಲ ಎಂದು ಕ್ರಿಯಾ ಸಮಿತಿ ಪದಾಧಿಕಾರಿಯೊಬ್ಬರು ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಒಬ್ಬ ಪದಾಧಿಕಾರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅವರ ಆರೋಗ್ಯ ಮುಖ್ಯವಾಗಿದ್ದು, ಅವರನ್ನು ಹೊರತುಪಡಿಸಿ ಉಳಿದವರು ಭಾಗವಹಿಸಬಹುದಿತ್ತಲ್ಲ ಎಂದು ನೌಕರರು ಪ್ರಶ್ನೆ ಮಾಡಿದ್ದಾರೆ. ನೌಕರರ ಬಗ್ಗೆ ಕಾಳಜಿ ಇರುವ ಪದಾಧಿಕಾರಿಗಳು ಇಂಥ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ನಿನ್ನೆ ಅಂದರೆ ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ನೌಕರರಿಗೆ ಬರಬೇಕಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಕುರಿತು ಚರ್ಚಿಸಲು ಒನ್ ಮ್ಯಾನ್ ಕಮಿಟಿ ಅಧ್ಯಕ್ಷ ನಿವೃತ್ತ ಐಎಎಸ್‌ಅಧಿಕಾರಿ ಎಂ.ಆರ್.ಶ್ರೀನಿವಾಸ್‌ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಆ ಸಭೆಯು ಮಧ್ಯಾಹ್ನ 2.30ರಿಂದ ನಡೆಯಲಿದ್ದು, ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರಿನ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ ಕ್ರಿಯಾ ಸಮಿತಿಯ ಒಬ್ಬ ಪದಾಧಿಕಾರಿಗೆ ಆರೋಗ್ಯ ಹದಗೆಟ್ಟಿದ್ದರಿಂದ ಇಡೀ ಕ್ರಿಯಾ ಸಮಿತಿಯ ಪದಾಧಿಕಾರಿಗಳೇ ಸಭೆಗೆ ಗೈರಾಗಿದ್ದು ಬೇಸರದ ಸಂಗತಿ ಎಂದು ನೌಕರರು ತಿಳಿಸಿದ್ದಾರೆ.
2020ರ ಜನವರಿ 1ರಿಂದಲೇ ಹಿಂಬಾಕಿ ( Arrears) ಕೊಡುವ ಸಂಬಂಧ ಮಾರ್ಚ್‌ನಿಂದ ಈವರೆಗೂ ಯಾವುದೇ ತೀರ್ಮಾನವಾಗಿಲ್ಲ. ಹೀಗಾಗಿ ಈ ಸಂಬಂಧ ಸಾರಿಗೆ ಅಧಿಕಾರಿಗಳು, ಸರ್ಕಾರದ ಅಧಿಕಾರಿಗಳು, ನೌಕರರ ಸಂಘಟನೆಗಳು ಹಾಗೂ ನ್ಯಾಯಾಲಯದ ಅಧಿಕಾರಿಗಳು ಒನ್ ಮ್ಯಾನ್ ಕಮಿಟಿ ಅಧ್ಯಕ್ಷರ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಿದ್ದು ಆ ಸಭೆಯಲ್ಲಿ ಭಾಗವಹಿಸಿದ್ದ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳೂ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.
ಈ ಎಲ್ಲ ಪದಾಧಿಕಾರಗಳು ಚರ್ಚೆ ವೇಳೆ ಹಂಚಿಕೊಂಡಿರುವ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಎಂ.ಆರ್.ಶ್ರೀನಿವಾಸ್‌ಮೂರ್ತಿ ತಿಳಿಸಿದ್ದಾರೆ. ಹೀಗಾಗಿ ಸಾರಿಗೆ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಹಿಂಬಾಕಿಯನ್ನು ಯಾವ ತಿಂಗಳಿನಿಂದ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇನ್ನು ಒನ್ ಮ್ಯಾನ್ ಕಮಿಟಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್‌ಮೂರ್ತಿ ಅವರು ಸಭೆಯಲ್ಲಿ ನಡೆದ ಚರ್ಚೆಯ ವರದಿಯನ್ನು ಸಿಎಂ ಸಿದ್ದಾರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅತೀ ಶೀಘ್ರದಲ್ಲೇ ಸಲ್ಲಿಸುವುದಾಗಿ ತಿಳಿಸಿದ್ದಾರೆ.