
ಚಿತ್ತಾಪುರ: ಪಟ್ಟಣದ ಪತ್ರಕರ್ತನ ಮೇಲೆ ಬೆದರಿಕೆ ಹಾಕಿದ ಅಳ್ಳೋಳ್ಳಿ ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಅಮಾನತ್ತು ಮಾಡಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಒತ್ತಾಯಿಸಿದ್ದಾರೆ.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಅಳ್ಳೋಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಖರ್ಚು ವೆಚ್ಚದ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಪತ್ರಕರ್ತ ನಾಗಯ್ಯ ಸ್ವಾಮಿಗೆ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಬೆದರಿಕೆ ಹಾಕಿದ್ದಾರೆ.
ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿದ್ದು, ಸಮಗ್ರ ಮಾಹಿತಿಯೊಂದಿಗೆ ವರದಿ ಮಾಡುವುದಕ್ಕಾಗಿ ಮಾರ್ಚ್ 1ರಂದು 15ನೇ ಹಣಕಾಸಿನಲ್ಲಿ 2023-24, 2024-25 ನೇ ಸಾಲಿನಲ್ಲಿ ನಡೆದ ಕಾಮಗಾರಿಗಳು, ಖರ್ಚಾದ ಅನುದಾನದ ಬಗ್ಗೆ ಮಾಹಿತಿ ನೀಡಿವಂತೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಮಾರ್ಚ್ 5ರಂದು ಮಧ್ಯಾಹ್ನ 1.53ಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಪತ್ರಕರ್ತನಿಗೆ ಕರೆ ಮಾಡಿ, ಬ್ಲಾಕ್ ಮೇಲ್ ಮಾಡುವುದಕ್ಕಾಗಿ ಆರ್‌ಟಿಐ ಅಡಿ ಮಾಹಿತಿ ಕೇಳುತ್ತಿದ್ದೀಯಾ, ನಿನ್ನ ವಿರುದ್ಧ ಕೇಸ್ ದಾಖಲಿಸಿ ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಅದಷ್ಟೇ ಅಲ್ಲದೆ ಕೆಟ್ಟದಾಗಿ ನಿಂದಿಸುವುದರ ಮೂಲಕ ದರ್ಪ ಮೆರೆದು ಅವಹೇಳನ ಮಾಡಿದ್ದಾರೆ. ಈ ಬಗ್ಗೆ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ನಾಗಯ್ಯ ಸ್ವಾಮಿ ದೂರು ನೀಡಿದ್ದಾರೆ. ಆದರೆ ಇದುವರೆಗೂ ಕ್ರಮಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಹಲವು ವರ್ಷಗಳಿಂದ ನಾವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇವೆ. ಸಂವಿಧಾನದ 4ನೇ ಅಂಗವಾಗಿ ಶಿಸ್ತುಬದ್ಧ ಆಡಳಿತದ ಹಂಬಲ ಹೊತ್ತು ಕೆಲಸ ಮಾಡಿಕೊಂಡು ಬರುತ್ತಿವೆ. ಹಿಂದೆ ಬೇರೆ ಗ್ರಾಪಂನಲ್ಲಿ ಕಾರ್ಯನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆ ಮಾಡಬೇಕು. ಈ ಕೂಡಲೇ ಸಂಬಂಧಪಟ್ಟ ಪಿಡಿಒ ವಿರುದ್ಧ ಶಿಸ್ತು ಕ್ರಮ ಜಾರಿ ಮಾಡಬೇಕು. ಕನಿಷ್ಠ ಸೌಜನ್ಯವಿಲ್ಲದೆ ಮಾತನಾಡಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಸಂಘವು ಒತ್ತಾಯಿಸಿದೆ.
ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಪತ್ರ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವೀರೇಂದ್ರಕುಮಾರ ಕೊಲ್ಲೂರ, ತಾಲೂಕು ಸಂಘದ ಪದಾಧಿಕಾರಿಗಳಾದ ಮಡಿವಾಳಪ್ಪ ಹೇರೂರ, ರಾಯಪ್ಪ ಕೋಟಗಾರ, ಅನಂತನಾಗ ದೇಶಪಾಂಡೆ, ಸಂತೋಷಕುಮಾರ ಕಟ್ಟಿಮನಿ, ದಯಾನಂದ ಖಜೂರಿ, ಅಣ್ಣರಾಯ ಮಾಡಬೂಳಕರ್, ಪ್ರಥ್ವಿರಾಜ ಸಾಗರ, ಚಂದ್ರಶೇಖರ ಬಳ್ಳಾ, ನಾಗಯ್ಯಸ್ವಾಮಿ ಅಲ್ಲೂರ ಸೇರಿದಂತೆ ಇತರರಿದ್ದರು.