ಬೆಂಗಳೂರು: ಈ ಹಿಂದೆ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ರಚಿಸಿದ ಆಯೋಗವು 2015 ರಲ್ಲಿ ನಡೆಸಿದ ಸಮೀಕ್ಷೆಯ ವರದಿ ಇನ್ನೂ ಮಂಡನೆಯಾಗಿದೆ ಗೆದ್ದಲು ಹಿಡಿಯುತ್ತಿದೆ. ಹೀಗಾಗಿ ಅದನ್ನು ಗೆದ್ದಲು ಹುಳುಗಳು ತಿಂದು ಮುಗಿಸುವ ಮುನ್ನಾ ಕಾಂತರಾಜು ವರದಿ ಮಂಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ನಗರದಲ್ಲಿ ಮಂಗಳವಾರ ಭೇಟಿ ಮಾಡಿದ ಮುಖ್ಯಮಂತ್ರಿ ಚಂದ್ರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರವು ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಅನೇಕ ಆಯೋಗಗಳನ್ನು ರಚಿಸಿದೆ. ಈ ಹಿಂದೆ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ರಚಿಸಿದ ಆಯೋಗವು 2015 ರಲ್ಲಿ ನಡೆಸಿದ ಸಮೀಕ್ಷೆಯ ವರದಿ ಇನ್ನೂ ಪ್ರಕಟಗೊಳ್ಳದಿರುವುದು ಅಸಮಂಜಸ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಈ ಆಯೋಗದ ವರದಿ ರಾಜ್ಯದ ಪ್ರತಿಯೊಂದು ಜಾತಿ, ಉಪಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಜನರಿಗೆ ತಿಳಿಸುತ್ತದೆ ಎಂಬ ನಂಬಿಕೆಯನ್ನು ಮೂಡಿಸಿತ್ತು. ಈ ವರದಿ ಇನ್ನೂ ಮಂಡನೆಯಾಗದಿರುವುದು ರಾಜ್ಯದ ಬೊಕ್ಕಸಕ್ಕೆ ಆದ ನಷ್ಟ ಮಾತ್ರವಲ್ಲದೇ, ಹಿಂದುಳಿದ ಜಾತಿಯ ಜನರಿಗೆ ಅನ್ಯಾಯವು ಕೂಡ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ ಸವಲತ್ತುಗಳು ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಿತಿಗೆ ಹೋಲಿಕೆ ಮಾಡುವಂತಿರಬೇಕು ಎಂದು ಕೆ.ಸಿ.ವಸಂತ್‌ಕುಮಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಜತೆಗೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಕೈಗೊಳ್ಳುವ ಸಮೀಕ್ಷೆಗೆ ಇಡೀ ರಾಜ್ಯದ ಜನಸಂಖ್ಯೆಯನ್ನು ಒಳಪಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಸರ್ವೊಚ್ಚ ನ್ಯಾಯಾಲಯದ ನಿಯಮ ಪಾಲನೆ ಯಾಗದಿರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
2015ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ, 2018 ರಲ್ಲಿ ರಚನೆಯಾದ ಮೈತ್ರಿ ಸರ್ಕಾರ ಹಾಗೂ ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವರದಿ ಮಂಡನೆಯಾಗಿಲ್ಲ. ಇದು ಶ್ರಮಿಕರ, ಹಿಂದುಳಿದ ವರ್ಗದವರ ವಿರುದ್ಧದ ಧೋರಣೆಯಾಗಿದೆ ಎಂದು ಕಿಡಿಕಾರಿದರು.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಸಭೆಯಲ್ಲಿ ವರದಿ ಮಂಡನೆ ಮತ್ತು ಅನುಷ್ಠಾನವನ್ನು ಶೀಘ್ರವೇ ಮಾಡುವುದಾಗಿ ಪ್ರಸ್ತಾಪಿಸಿದ್ದಾರೆ. ಆದ ಕಾರಣ, ಈ ವಿಚಾರದಲ್ಲಿ ಯಾವುದೇ ರೀತಿಯ ಕಾರಣಗಳನ್ನು ನೀಡದೇ ರಾಜ್ಯದ ಜಿ.ಪಂ, ತಾ.ಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ವರದಿ ಮಂಡಿಸುವ ಎಲ್ಲ ಪ್ರಕ್ರಿಯೆಗಳು ಮುಗಿಯುವಂತೆ ನೋಡಿಕೊಳ್ಳಬೇಕೆಂದು ಚಂದ್ರು ಆಗ್ರಹಿಸಿದರು.
ಭೇಟಿಯ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಇನ್ನಿತರ ಮುಖಂಡರು ಭಾಗವಹಿಸಿದ್ದರು.