ಮುಂಬೈ: ಕೌನ್ ಬನೇಗಾ ಕರೋಡ್‌ಪತಿಯ 15ಶೋನಲ್ಲಿ 12.50 ಲಕ್ಷ ರೂ.ಗೆ ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಕುರಿತು ಕೇಳಲಾದ ಪ್ರಶ್ನೆಗೆ ಸಾಹಿಲ್ ಎಂಬ ಸ್ಪರ್ಧಿಯು ಉತ್ತರ ನೀಡುವಲ್ಲಿ ವಿಫಲರಾಗಿದ್ದು, ಈ ಮೂಲಕ 12.50 ಲಕ್ಷ ರೂ. ಗೆಲ್ಲುವ ಬದಲು ಕೇವಲ 3.2 ಲಕ್ಷ ರೂ.ಗೆ ಆಟ ಮುಗಿಸಿದ್ದಾರೆ.
ಹೌದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಹುವರ್ಷಗಳಿಂದ ನಡೆಸಿಕೊಡುವ ಈ ಕೌನ್ ಬನೇಗಾ ಕರೋಡ್‌ಪತಿ ಭಾರಿ ಪ್ರಸಿದ್ಧವಾಗಿದೆ. ಈ ಶೋನಲ್ಲಿ ಸ್ಪರ್ಧಿಸುವುದಕ್ಕೆ ಹಲವಾರು ಮಂದಿ ಕ್ಯೂನಲ್ಲಿ ನಿಂತಿರುತ್ತಾರೆ ಆದರೆ ಕೆಲವರಿಗಷ್ಟೆ ಅವಕಾಶ ಸಿಗುತ್ತಿದೆ.
ಸಾಹಿಲ್‌ಗೆ ಕೇಳಿದ ಪ್ರಶ್ನೆ ಏನು? : 12.50 ಲಕ್ಷ ರೂ.ಗೆ ಅಮಿತಾಭ್ ಬಚ್ಚನ್ ಅವರು ಅನಿಲ್ ಕುಂಬ್ಳೆ ಕುರಿತು ಪ್ರಶ್ನೆ ಕೇಳಿದ್ದರು. “ಅನಿಲ್ ಕುಂಬ್ಳೆ ಅವರು ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ ಎಲ್ಲ 10 ವಿಕೆಟ್ ಪಡೆದಾಗ ಯಾರು ಅಂಪೈರ್ ಆಗಿದ್ದರು” ಎಂಬುದು ಪ್ರಶ್ನೆಯಾಗಿತ್ತು. ಎ. ಪಿಲೂ ರಿಪೋರ್ಟರ್, ಬಿ. ಎಸ್. ವೆಂಕಟರಾಘವನ್, ಸಿ. ಡೇವಿಡ್ ಶೆಫರ್ಡ್ ಹಾಗೂ ಡಿ. ಎ.ವಿ. ಜಯಪ್ರಕಾಶ್ ಎಂಬ ಆಯ್ಕೆಗಳನ್ನೂ ನೀಡಲಾಗಿತ್ತು. ಆದರೆ, ಸಾಹಿಲ್ ಅವರು ಸರಿಯಾದ ಉತ್ತರ ನೀಡಲು ಆಗಲಿಲ್ಲ.
ಇದಕ್ಕೆ ಸರಿಯಾದ ಉತ್ತರ ಎ.ವಿ. ಜಯಪ್ರಕಾಶ್ ಆಗಿತ್ತು. 1999ರಲ್ಲಿ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡಿದರು. ಇಂತಹ ಸಾಧನೆ ಮಾಡಿದ ವಿಶ್ವದ ಎರಡನೇ ಹಾಗೂ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೆ ಭಾಜನರಾದರು. ಈ ಪಂದ್ಯದ ಅಂಪೈರ್ ಆಗಿದ್ದ ಎ.ವಿ.ಜಯಪ್ರಕಾಶ್ ಅವರು ಕೂಡ ಕನ್ನಡಿಗರೇ ಎಂಬುದು ಮತ್ತೊಂದು ವಿಶೇಷ.
ಪ್ರಥಮ ದರ್ಜೆ ಕ್ರಿಕೆಟರ್ ಆಗಿದ್ದ ಎ.ವಿ.ಜಯಪ್ರಕಾಶ್ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಜತೆಗೆ ಐಪಿಎಲ್‌ನಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಇವರು ಎಲ್ಲ ಮಾದರಿಯ ಕ್ರಿಕೆಟ್ ಅಂಪೈರಿಂಗ್‌ಗೆ ವಿದಾಯ ಹೇಳಿದ್ದರು.
ಕೌನ್ ಬನೇಗಾ ಕರೋಡ್‌ಪತಿ ಶೋ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 15 ಸೀಸನ್‌ಗಳನ್ನೂ ಅಮಿತಾಭ್ ಬಚ್ಚನ್ ಅವರೇ ನಡೆಸುಕೊಂಡು ಬರುತ್ತಿದ್ದು, ಭಾರತ ಮಾತ್ರವಲ್ಲ ವಿದೇಶದಲ್ಲೂ ಶೋ ಖ್ಯಾತಿ ಗಳಿಸಿದೆ. ಬಡವರು, ಪ್ರತಿಭಾವಂತರು, ಸೆಲೆಬ್ರಿಟಿಗಳು ಕೂಡ ಶೋನಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲೂ ಇದೇ ಮಾದರಿಯ ಶೋ, “ಕನ್ನಡದ ಕೋಟ್ಯಧಿಪತಿ” ಹಲವು ಸಿಸನ್‌ಗಳಲ್ಲಿ ಪ್ರಸಾರವಾಗಿದೆ.