ಕೆಐಎಡಿಬಿ: ಭೂ ಸ್ವಾಧೀನ ಕುರಿತು ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ರೈತರ ನಿಯೋಗದ ಜತೆ ಚರ್ಚೆ- ರಾಮಲಿಂಗಾರೆಡ್ಡಿ


ಆನೇಕಲ್: ತಾಲೂಕಿನ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದ ಜತೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಪ್ರಸ್ತುತ ಸರ್ಜಾಪುರ ಹೋಬಳಿಯಲ್ಲಿ ಕೆ.ಐ.ಎ.ಡಿ.ಬಿ ವತಿಯಿಂದ ನಡೆಯುತ್ತಿರುವ ಭೂ ಸ್ವಾಧೀನದ ಕುರಿತು ಚರ್ಚೆ ನಡೆಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಅನೇಕ ದಶಕಗಳಿಂದ ಕೈಗಾರಿಕೆಗಳಿಗೆ ಮತ್ತು ವಸತಿ ಯೋಜನೆಗಳಿಗೆ ಸಾವಿರಾರು ಎಕರೆ ಭೂಮಿ ಈಗಾಗಲೇ ಸ್ವಾಧೀನಗೊಂಡಿದ್ದು, ಈ ಹಿಂದೆ ಡಿಸೆಂಬರ್ 2024ರಲ್ಲಿ ರೈತರ ನಿಯೋಗ ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರೈತರ ಮನೆಗಳು, ಪಾಲಿಹೌಸ್, ಫಲವತ್ತಾದoತಹ ಕೃಷಿ ಮತ್ತು ತೋಟಗಾರಿಕಾ ಭೂಮಿಗಳನ್ನು ಭೂಸ್ವಾಧೀನದಿಂದ ಕೈ ಬಿಡಬೇಕೆಂದು ಕೈಗಾರಿಕಾ ಮಂತ್ರಿಗಳಿಗೆ ಪತ್ರ ಮುಖೇನ ಒತ್ತಾಯಿಸಿದ್ದೆ ಎಂದರು.
ಜತೆಗೆ, 2006 ರಲ್ಲಿ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ KIADB ಸಂಸ್ಥೆಯು 1260 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ರೈತರಿಗೆ ನಾನು ಸಹಕರಿಸಿದ್ದೆ ಎಂದು ಹೇಳಿದರು.
ರೈತರ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆಯಾಗಿದ್ದು. ಆನೇಕಲ್ ತಾಲೂಕಿನ ರೈತರ ಹಕ್ಕು-ಹಿತಗಳ ಪರವಾಗಿ ನಾನು ಸಹ ಸದಾ ಬೆಂಬಲವಾಗಿ ನಿಂತಿದ್ದೇನೆ ಎಂದು ತಿಳಿಸಿದರು.
ಆನೇಕಲ್ ಶಾಸಕ ಶಿವಣ್ಣ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥರೆಡ್ಡಿ, ಆರ್.ಕೆ.ರಮೇಶ್, ಇತರೇ ಮುಖಂಡರು, ಸಮಿತಿಯ ಅಧ್ಯಕ್ಷರು, ಮಾರ್ಗದರ್ಶಕರು, ಕಾರ್ಯದರ್ಶಿಗಳು, ಸಂಚಾಲಕರು, ಹೋರಾಟಗಾರರು, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Related
