KKRTC ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 3 ವರ್ಷ ಜೈಲು, 6 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ ಮಹತ್ವದ ತೀರ್ಪು

ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 6 ಸಾವಿರ ರೂ. ದಂಡ ವಿಧಿಸಿ ಹೊಸಪೇಟೆ ಪ್ರಧಾನ ಸಿಜೆ(ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪರಶುರಾಮಪ್ಪ ಎಂಬಾತನಿಗೆ ಈ ಶಿಕ್ಷೆ ವಿಧಿಸಿ ನ್ಯಾಯಧೀಶರಾದ ಪ್ರಶಾಂತ ನಾಗಲಾಪುರ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ತೀರ್ಪು ಇತ್ತೀಚೆಗೆ ಸರ್ಕಾರಿ ಬಸ್ ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುತ್ತಿರುವ ಕಿಡಿಗೇಡಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ.
ಪ್ರಕರಣದ ವಿವರ: ಕೆಕೆಆರ್‌ಟಿಸಿ ವಿಜಯನಗರ (ಹೊಸಪೇಟೆ) ವಿಭಾಗದ ಹಗರಿಬೊಮ್ಮನಹಳ್ಳಿ ಘಟನದ ನಿರ್ವಾಹಕ ಎಸ್.ಹುಲುಗಪ್ಪ ಹಾಗೂ ಚಾಲಕ ಮಲ್ಲೇಶ ಉಪ್ಪಾರ್ ಅವರು 2022ರ ಜುಲೈ 24ರಂದು ಹೊಸಪೇಟೆ – ಮರಿಯಮ್ಮನಹಳ್ಳಿ ಮಾರ್ಗದಲ್ಲಿ ಡ್ಯೂಟಿ ಮಾಡುತ್ತಿದ್ದರು.
ಇವರು ಸರ್ಕಾರಿ ನೌಕರರಾಗಿದ್ದು, ಹೊಸಪೇಟೆ ಮರಿಯಮ್ಮನಹಳ್ಳಿ ಮಾರ್ಗದಲ್ಲಿ ಅಂದು ಸಂಜೆ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟು ಸಂಜೆ 4 ಗಂಟೆ ಸಮಯಕ್ಕೆ ಹೊಸಪೇಟೆಯ ರಾಮಾ ಟಾಕೀಸ್ ಬಳಿಯ ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು.
ಈ ವೇಳೆ ನಿರ್ವಾಹಕ ಎಸ್.ಹುಲುಗಪ್ಪ ಅವರು ಬೇರೊಬ್ಬ ಪ್ರಯಾಣಿಕರಿಗೆ ಸರಿಯಾಗಿ ಬಸ್ ಹತ್ತಿ ನಿಮ್ಮ ಹತ್ತಿರ ದುಡ್ಡು ಇದೆಯೇ? ಈ ಹಿಂದೆ ಸಹಾ ನೀವು ದುಡ್ಡು ಕೊಡದೇ ಸತಾಯಿಸಿದ್ದೀ ಎಂದು ಕೇಳುತ್ತಿದ್ದಾಗ ಆರೋಪಿ ಪರಶುರಾಮಪ್ಪ ತನಗೆ ಸಂಬಂಧ ಇಲ್ಲದ ವಿಷಯಕ್ಕೆ ಬಂದು ಕಂಡಕ್ಟರ್ ಹತ್ತಿರ ಜಗಳ ತೆಗೆದು ಬಸ್ ಹತ್ತುವುದಕ್ಕಿಂತ ಮೊದಲೇ ರೊಕ್ಕ ಕೇಳಿರೇನಲೇ ಸೂಳೇ ಮಕ್ಕಳ ಎಂದು ಬಾಯಿಗೆ ಬಂದಂತೆ ಬೈದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ.

ಅಲ್ಲದೆ ನಿರ್ವಾಹಕ ಎಸ್.ಹುಲುಗಪ್ಪ ಅವರನ್ನು ಬಸ್ಸಿನಿಂದ ಕೆಳಕ್ಕೆ ಎಳೆದುಕೊಂಡು ಹೋಗಿ ಕೈಯಿಂದ ಮೂಗಿಗೆ ಗುದ್ದಿ ರಕ್ತಗಾಯ ಮಾಡಿದ್ದರು. ಇದು ತನಿಖೆಯಿಂದ ಧೃಡ ಪಟ್ಟ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿ ಎಎಸ್ಐ ಈಶ್ವರಪ್ಪ ಅವರು ಆರೋಪಿ ಪರಶುರಾಮಪ್ಪ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣ ಕೈಗೆತ್ತಿಕೊಂಡ ಹೊಸಪೇಟೆಯ ಪ್ರಧಾನ ಸಿಜೆ(ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶಾಂತ ನಾಗಲಾಪುರ ಅವರು ಸಾಕ್ಷಿದಾರರ ವಿಚಾರಣೆ ನಡೆಸಿ ಆರೋಪಿತ ಪರಶುರಾಮಪ್ಪ ಅಪರಾಧ ಎಸಗಿರುವುದು ಸಾಬೀತಾದಗಿದೆ ಹಿನ್ನೆಲೆಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 6 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಯಾವಯಾವ ಸೆಕ್ಷನ್ ಅಡಿ ಶಿಕ್ಷೆ?: ಆರೋಪಿ ಪರಶುರಾಮಪ್ಪಗೆ ಐಪಿಸಿ ಸೆಕ್ಷನ್ 353ರಡಿಯಲ್ಲಿ 1 ವರ್ಷ ಜೈಲು ವಾಸ ಮತ್ತು 3000 ರೂ. ಜುಲ್ಮಾನೆ. ಈ ಜುಲ್ಮಾನೆ ಕಟ್ಟಲು ವಿಫಲನಾದಲ್ಲಿ 2 ತಿಂಗಳುಗಳ ಕಾಲ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸತಕ್ಕದ್ದು.
ಇನ್ನು ಐಪಿಸಿ ಸೆಕ್ಷನ್ 323ರಡಿಯಲ್ಲಿ 1ವರ್ಷ ಜೈಲು ವಾಸ ಮತ್ತು 1000 ರೂ. ಜುಲ್ಮಾನೆ. ಈ ಜುಲ್ಮಾನೆ ಕಟ್ಟಲು ವಿಫಲನಾದಲ್ಲಿ 20 ದಿನಗಳವರೆಗೆ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು,
ಐಪಿಸಿ ಸೆಕ್ಷನ್ 504ರಡಿಯಲ್ಲಿ 1 ವರ್ಷ ಜೈಲು ವಾಸ ಮತ್ತು 2000 ರೂ. ಜುಲ್ಮಾನೆ. ಈ ಜುಲ್ಮಾನೆ ಕಟ್ಟಲು ವಿಫಲನಾದಲ್ಲಿ 1 ತಿಂಗಳವರೆಗೆ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಇನ್ನು ದಂಡದ ಒಟ್ಟು ಮೊತ್ತ 6000 ರೂ.ಗಳನ್ನು ನೊಂದ ಕಂಡಕ್ಟರ್‌ಗೆ ನೀಡಬೇಕೆಂದು ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ತೀರ್ಪು 23.08.2025 ರಂದು ನೀಡಿದ್ದು, ಈ ಪ್ರಕರಣದಲ್ಲಿ ಸರ್ಕಾರದ (ಕಂಡಕ್ಟರ್) ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕಿ ಜಿ.ಪ್ರಿಯಾಂಕ ವಾದಮಂಡಿಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related








